ಬೀದರ್ : ಶ್ರೀ ಎಚ್. ಕಾಂತರಾಜುರವರ ನೇತೃತ್ವದ ಆಯೋಗವು ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ-ಆರ್ಥಿಕ ಸಮೀಕ್ಷೆಯ ಮಾಹಿತಿ ಆಧರಿಸಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆಯವರು ಅಂಕಿ-ಸಂಖ್ಯೆಯನ್ನು ಅವೈಜ್ಞಾನಿಕವಾಗಿ ತಿರುಚಿ ಅತ್ಯಂತ ಹಿಂದುಳಿದ ಕೋಲಿ/ಕಬ್ಬಲಿಗ/ಬೆಸ್ತ ಮತ್ತು ಇದರ ಪರ್ಯಾಯ ಪದಗಳಿಗೆ ಅನ್ಯಾಯ ಮಾಡಿದ್ದಾರೆ. ಏಕೆಂದರೆ ಈಗಾಗಲೇ ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಕೋಲಿ/ಕಬ್ಬಲಿಗ/ಬೆಸ್ತ ಮತ್ತು ಇದರ ಪರ್ಠ್ಯಾಯ ಪದಗಳ ಒಟ್ಟು ಜನಸಂಖ್ಯೆ ಕೇವಲ 14.5 ಲಕ್ಷ ಎಂದಿದೆ. ಅದರಲ್ಲಿ ಬೆಸ್ತ (3,99,383), ಅಂಬಿಗ (1,34,230), ಗಂಗಾಮತ (73,627), ಕಬ್ಬೇರ್/ಕಬ್ಬೇರ (58,289), ಕಬ್ಬಲಿಗ (3,88,082) ಮತ್ತು ಮೋಗವೀರ (1,21,478) ಎಂದು ತೋರಿಸಲಾಗಿದೆ. ಈ ಜನಸಂಖ್ಯೆ ವಾಸ್ತವದಿಂದ ಕೂಡಿಲ್ಲಾ ಎಂದು ಸಮುದಾಯದ ಜನರು ವಿರೋಧಿಸುತ್ತಿದ್ದಾರೆ.
ಏಕೆಂದರೆ, 1977 ರಲ್ಲಿ ಹಾವನೂರು ವರದಿ ಆಧರಿಸಿ ಬಂದ ಕರ್ನಾಟಕ ಸರಕಾರದ ಮೀಸಲಾತಿ ಆದೇಶದಲ್ಲಿ ಕೋಲಿ/ಕಬ್ಬಲಿಗ/ಬೆಸ್ತ ಮತ್ತು ಇದರ ಪರ್ಯಾಯ ಪದಗಳನ್ನು ಹಿಂದುಳಿದ ಜಾತಿಗಳಲ್ಲಿ (ಬಿ.ಸಿ.ಟಿ) ಸೇರಿಸಲಾಗಿತ್ತು. ನಂತರ 1994 ರಲ್ಲಿ ಚಿನ್ನಪ್ಪರೆಡ್ಡಿ ವರದಿಯನುಸಾರ ಇದೇ ಜಾತಿಯ 39 ಪರ್ಯಾಯ ಪದಗಳನ್ನು ಪ್ರವರ್ಗ-1 ರ ಗುಂಪಿನಲ್ಲಿ ಸೇರಿಸಲಾಯ್ತು. ಈ ಎಲ್ಲಾ ಪರ್ಯಾಯ ಪದಗಳು ಕರ್ನಾಟಕದಾದ್ಯಂತ ಒಟ್ಟಾಗಿ ನೋಡಿದರೆ 35-40 ಲಕ್ಷ ಜನಸಂಖ್ಯೆ ಇದೆ. ಅದರಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೋಲಿ-ಕಬ್ಬಲಿಗರದೆ 6-7 ಲಕ್ಷ ಜನಸಂಖ್ಯೆ ಇದೆ. ಅದೇ ರೀತಿ ರಾಯಚೂರು, ಬೆಳಗಾವಿ, ಬಾಗಲಕೋಟೆ, ಹಾವೇರಿ, ಬಳ್ಳಾರಿ, ಮಂಗಳೂರು, ಉಡುಪಿ, ಕಾರವಾರ, ಮಂಡ್ಯ, ಮೈಸೂರು ಮುಂತಾದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಈ ಸುಮುದಾಯ ಹೊಂದಿದೆ.

ಇದು ಅಲ್ಲದೆ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರ್ಪಡೆಯಾಗಲು ಕೋಲಿ/ಕಬ್ಬಲಿಗ/ಬೆಸ್ತ ಮತ್ತು ಇದರ ಪರ್ಯಾಯ ಪದಗಳು ಎಲ್ಲಾ ಅರ್ಹತೆ ಹೊಂದಿದ್ದರೂ ರಾಜ್ಯ ಸರಕಾರಗಳ ಬೇಜವಾಬ್ದಾರಿ ಮತ್ತು ನಿರಾಶಕ್ತಿಯ ಕಾರಣದಿಂದ ಅನ್ಯಾಯಕ್ಕೆ ಒಳಗಾಗಿವೆ. ಇನ್ನು ಕಾಂತರಾಜು ವರದಿಯನುಸಾರ ಕೋಲಿ/ಕಬ್ಬಲಿಗ/ಬೆಸ್ತ ಜಾತಿಗಳನ್ನು ಕೇವಲ 14.5 ಲಕ್ಷ ಎಂದು ತೋರಿಸಿರುವುದರಿಂದ ಈ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದು ಅಲ್ಲದೆ ಬೆಸ್ತ, ಅಂಬಿಗ, ಗಂಗಾಮತ, ಕಬ್ಬೇರ್/ಕಬ್ಬೇರ, ಕಬ್ಬಲಿಗ ಮತ್ತು ಮೊಗವೀರ ರ್ಪಯಾಯ ಪದಗಳ ಜನಸಂಖ್ಯೆ ಪ್ರತ್ಯೇಕವಾಗಿ ತೋರಿಸಿರುವುದರಿಂದ ಆಯೋಗದ ಜನಸಂಖ್ಯೆಯ ವರದಿಯು ಈ ಸಮುದಾಯಕ್ಕೆ ತೀರಾ ಅನ್ಯಾಯವಾಗುತ್ತದೆ. ಇದನ್ನು ವಾಸ್ತವದ ಅಡಿಯಲ್ಲಿ ವೈಜ್ಞಾನಿಕವಾಗಿ ಕೋಲಿ/ಕಬ್ಬಲಿಗ/ಬೆಸ್ತ ಮತ್ತು ಇದರ ಪರ್ಠ್ಯಾಯ ಪದಗಳನ್ನು ಒಟ್ಟಾಗಿಸಿ ವರದಿ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಡಾ. ತಳವಾರ ಸಾಬಣ್ಣಾ ಆಗ್ರಹಿಸಿದ್ದಾರೆ.