ಬೀದರ್: ತಾಲ್ಲೂಕಿನ ಕಪಲಾಪುರ(ಎ) ಗ್ರಾಮದಲ್ಲಿ ಸಿದ್ಧಾರೂಢ ಸ್ವಾಮೀಜಿ ಜಯಂತಿಯನ್ನು ಈಚೆಗೆ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಜಯಂತಿ ಅಂಗವಾಗಿ ಸಿದ್ಧಾರೂಢ ಮಠದಲ್ಲಿ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಸಿದ್ಧಾರೂಢರ ಮೂರ್ತಿಗೆ ಪೂಜೆ, ಅಭಿಷೇಕ, ತೊಟ್ಟಿಲು, ಭಜನೆ, ಕೀರ್ತನೆ, ಮೆರವಣಿಗೆಯಲ್ಲಿ ವಿವಿಧೆಡೆಯ ಭಕ್ತರು ಪಾಲ್ಗೊಂಡರು.
ಕೊನೆಯ ದಿನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ರಥದಲ್ಲಿ ಸಿದ್ಧಾರೂಢ ಸ್ವಾಮೀಜಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಕೋಲಾಟ, ಭಜನೆ ಮತ್ತಿತರ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಯುವಕರು, ಮಹಿಳೆಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಇದಕ್ಕೂ ಮುನ್ನ ಮಠದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಮಠದ ಪೀಠಾಧಿಪತಿ ಪೂರ್ಣಾನಂದ ಸ್ವಾಮೀಜಿ, ಶಾಂತಿ, ನೆಮ್ಮದಿಯ ಜೀವನಕ್ಕೆ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಪಾಲಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಬೇಕು ಎಂದು ಕಿವಿಮಾತು ಹೇಳಿದರು.
ಶಂಕರಾನಂದ ಸ್ವಾಮೀಜಿ, ಸದ್ರೂಪಾನಂದ ಸ್ವಾಮೀಜಿ, ಶಿವಶರಣ ಗುಂಡಪ್ಪ ಬೆಳಕೇರೆ, ಶರಣಯ್ಯ ಸ್ವಾಮಿ ಮರ್ಜಾಪುರ ಮಾತನಾಡಿದರು.
ಮಠದ ಟ್ರಸ್ಟ್ ಧರ್ಮದರ್ಶಿಗಳಾದ ಹಣಮಂತರಾವ್ ಮೈಲಾರೆ, ಶಿವರಾಜ ಮೂಲಗೆ, ಬಸವರಾಜ ಮೂಲಗೆ, ಶಿವರಾಜ ಖೇಮಶೆಟ್ಟಿ, ಮಲ್ಲಿಕಾರ್ಜುನ ಕೋಟೆ, ಶಿವಕುಮಾರ ಭಾಲ್ಕೆ, ಮಲ್ಲಿಕಾರ್ಜುನ ಮಡಿವಾಳ, ರಮೇಶ ಮೈಲಾರೆ, ಪ್ರಕಾಶ ಬಿರಾದಾರ, ಸುಧಾಕರ ಹಳೆಂಬುರೆ, ಶಿವಾನಂದ ಮಮದಾಪುರೆ, ಕಲಾವತಿ ಕೊಳಾರೆ, ಮಾಣೆಮ್ಮ ಕೊಳಾರೆ, ಮಹಾನಂದ ಚಾಂಬೋಳೆ ಮತ್ತಿತರರು ಉಪಸ್ಥಿತರಿದ್ದರು.
ಮಠದಲ್ಲಿ ಐದನೇ ವೇದಾಂತ ಪರಿಷತ್ ಕಾರ್ಯಕ್ರಮವೂ ಜರುಗಿತು.