ಬೀದರ: ಮಾಜಿ ಪ್ರಧಾನಮಂತ್ರಿ ದಿವಂಗತ ಆಟಲ್ ಬಿಹಾರಿ ವಾಯಪೇಯಿಯವರ ಜೀವನ ಮತ್ತು ಸಾಧನೆ ಹಾಗೂ ಈ ಹಿಂದೆ ಬಿಜೆಪಿ ಸರ್ಕಾರದ ಸಾಧನೆ ಮತ್ತು ಕಾಂಗ್ರೇಸ್ ಸರ್ಕಾರದ ಜನವಿರೋಧಿ ನೀತಿ ತಿಳಿಸಲು ಬಿಜೆಪಿ ವತಿಯಿಂದ ಶೀಘ್ರದಲ್ಲಿಯೇ ‘ಹಳ್ಳಿಗೆ ನಡೆಯಿರಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದು ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಒಂದು ಭಾಗವಾಗಲಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ತಿಳಿಸಿದರು.
ನಗರದ ನೌಬಾದನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಬಿಜೆಪಿ ಸಂಸ್ಥಾಪನಾ ದಿನ ಹಾಗೂ ಆಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳ್ಳಿಗೆ ನಡೆಯಿರಿ ಕಾರ್ಯಕ್ರಮದ ಮೂಲಕ ಹಳ್ಳಿಗಳಲ್ಲಿ ಬಿಜೆಪಿ ಸಕ್ರಿಯ ಹಾಗೂ ಸಾಮಾನ್ಯ ಸದಸ್ಯರ ಸಭೆ ಮಾಡಬೇಕಾಗಿದೆ. ಜೊತೆಗೆ ಏಪ್ರಿಲ್ 14 ರಂದು ಎಲ್ಲಾ ಬಿಜೆಪಿ ಕಚೇರಿ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಬೇಕು ಎಂದು ತಿಳಿಸಿದರು. ಪ್ರದಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಆಲಿಸುವುದರಲ್ಲಿ ಈ ಬಾರಿಯೂ ಬೀದರ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿ ಬಂದಿದೆ. ಜೊತೆಗೆ ಆಟಲ್ ವಿರಾಸತ್ ಕಾರ್ಯಕ್ರಮದ ಭಾಗವಾಗಿ ಕಳೆದ ಒಂದು ತಿಂಗಳಿನಿAದ ಕವಿ ಸಮ್ಮೇಳನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಾಬು ವಾಲಿಯವರ ಸಂಚಾಲಕತ್ವದಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಸಾಕಷ್ಟು ಕವಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು ಎಂದು ಪಾಟೀಲ ತಿಳಿಸಿದರು.

ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಸಮರ್ಪಕವಾದ ಆಡಳಿತ ನೀಡಿಲ್ಲ. ಅನುಭವ ಮಂಟಪಕ್ಕೆ ಸಮರ್ಪಕ ಅನುದಾನ ನೀಡಿಲ್ಲ. ಔರಾದ ತಾಲೂಕಿನಲ್ಲಿ ಸೀಪೆಟ್ ಕಾಲೇಜು ಸ್ಥಾಪನೆಗಾಗಿ ಹಾಗೂ 36 ಕೆರೆಳ ತುಂಬಿಸಲು ನಮ್ಮ ಸರ್ಕಾರ ಅನುದಾನ ನೀಡಿತ್ತು. ಆದರೆ ಕಾಂಗ್ರೇಸ್ ಸರ್ಕಾರ ಈಗ ನೀಡಿಲ್ಲ. ಬೀದರ-ನಾಂದೇಡ್ ರೈಲ್ವೆ ಮಾರ್ಗ ನಿರ್ಮಿಸಲು ಬೊಮ್ಮಾಯಿ ಸರ್ಕಾರ ಅನುದಾನ ನೀಡಿತ್ತು. ಆದರೆ ಇಂದು ಕಾಂಗ್ರೇಸ್ ಸರ್ಕಾರ ನೀಡಲಿಲ್ಲ. ಇಂತಹ ಅನೇಕ ಕಾಂಗ್ರೇಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಶೀಘ್ರದಲ್ಲೇ ಹೋರಾಟ ಮಾಡಿ ಸರ್ಕಾರಕ್ಕೆ ಬಿಸಿ ತಲುಪಿಸೋಣ. ಆಟಲ್ ಬಿಹಾರಿ ವಾಜಪೇಯಿಯವರ ಅಭಿವೃದ್ಧಿ ಕುರಿತು ಜನತೆಗೆ ತಿಳಿಸುವ ಕೆಲಸ ಮಾಡೋಣ ಎಂದರು.
ವೇದಿಕೆ ಮೇಲೆ ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ, ಶಾಸಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಶೈಲೇಂದ್ರ ಕೆ. ಬೆಲ್ದಾಳೆ, ಮಾಜಿ ವಿಧಾನ ಪರಿಷತ್ ಸ್ಪೀಕರ್ ರಘುನಾಥರಾವ ಮಲ್ಕಾಪುರೆ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ, ಬಾಬುರಾವ ಮದಕಟ್ಟಿ, ಆಟಲ್ ವಿರಾಸತ್ ಸಮಿತಿ ಸಂಚಾಲಕ ಬಾಬು ವಾಲಿ, ಸದಸ್ಯರಾದ ಶಕುಂತಲಾ ಬೆಲ್ದಾಳೆ, ಶ್ರೀನಿವಾಸ ಚೌಧರಿ, ಗುರುನಾಥ ಜ್ಯಾಂತಿಕರ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವರಾವ ಹುಸಾರೆ, ಪಕ್ಷದ ಬೀದರ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್, ಕಿರಣ ಪಾಟೀಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖ್ಯ ವಕ್ತಾರ ಶಿವರಾಜ ಗಂದಗೆ ಆಟಲ್ ಬಿಹಾರಿ ವಾಜಪೇಯಿಯವರ ಸಾಧನೆ ಕುರಿತು ಮಾತನಾಡಿದರು. ಇದೇ ವೇಳೆ ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.