ಯುಗಾದಿ ಪ್ರಯುಕ್ತ ಜಾನಪದ ಸಂಗೀತೋತ್ಸವ ಕಾರ್ಯಕ್ರಮ
ಬೀದರ್: ಇಂದು ಆಧುನಿಕತೆಯ ಭರಾಟೆಯಲ್ಲಿ ವ್ಯಕ್ತಿ ದೇಶಿ ಸಂಸ್ಕೃತಿಯನ್ನು ಮರೆತು ಹಪಾಹಪಿತನದಿಂದ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾನೆ. ಇದರಿಂದ ರಾಜ್ಯದಲ್ಲಿ ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯ ದಿನೇ ದಿನೇ ಮರೆಮಾಚುತ್ತಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲಾ ಸಂಘ-ಸಂಸ್ಥೆಗಳ ಮೇಲಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಚಿಕ್ಕಪೇಟ ಬೀದರ ಇವರ ಸಂಯುಕ್ತಾಶ್ರಯದಲ್ಲಿ ೨೦೨೦-೨೧ನೇ ಸಾಲಿನ ಸಂಘ-ಸAಸ್ಥೆಗಳ ವಿಶೇಷ ಘಟಕ ಯೋಜನೆಯಡಿಯಲ್ಲಿ ಬಲ್ಲೂರ ಗ್ರಾಮದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಸಭಾಂಗಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಜಾನಪದ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲೆ ಬುಲಾಯಿ, ಜೋಗುಳ, ಸಂಪ್ರದಾಯದ ಹಾಡುಗಳು, ಕೋಲಾಟ ಇವುಗಳು ಮುಂದಿನ ಪೀಳಿಗೆಗೆ ತಿಳಿಸಬೇಕಾದರೆ ಜಾನಪದ ಸಂಸ್ಕೃತಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಮಾತನಾಡಿ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಲು ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚು ಹೆಚ್ಚು ಮುಂದೆ ಬಂದು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಮುದಾಳೆ ಮಾತನಾಡಿ ಜನಪದ ಕಲೆ ಸಾಹಿತ್ಯ ಸಂಸ್ಕೃತಿಯ ಸಂವರ್ಧನೆಗಾಗಿ ಈ ಜಾನಪದ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸುಮಾರು ೧೦ಕ್ಕೂ ಅಧಿಕ ಜಾನಪದ ಕಲಾಪ್ರಕಾರಗಳನ್ನು ಒಂದೇ ವೇದಿಕೆ ಮೇಲೆ ಕಲಾವಿದರಿಂದ ಪ್ರಸ್ತುತಪಡಿಸಲಾಗಿದೆ. ಜನಪದ ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ವೇದಿಕೆ ಮೇಲೆ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಚಾರ್ಯರಾದ ಸುನೀಲಕುಮಾರ ಸಿಂಗಾರೆ, ವಸತಿ ನಿಲಯ ಪಾಲಕ ಶ್ರೀಮಂತ ಸಪಾಟೆ, ಪತ್ರಕರ್ತ ಸುನೀಲ ಭಾವಿಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಂ.ಪಿ.ಮುದಾಳೆ ಸ್ವಾಗತಿಸಿದರು. ಶಿವಕುಮಾರ ನಿರೂಪಿಸಿದರು. ಗೌತಮ ವಂದಿಸಿದರು.
ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ: ಮಾರುತಿ ಕೋಳಿ ಅವರ ವಚನ ಗಾಯನ, ಪುಂಡಲಿಕರಾವ ಗುಮ್ಮಾ ಅವರ ಜಾನಪದ ಗಾಯನ, ಆಶಾ ಪಾಟೀಲ ಅವರ ಕೋಲಾಟ, ಶ್ರೀಮತಿ ರಂಗಮ್ಮ ಅವರ ಜನಪದ ಹಾಡುಗಳು, ಅರುಣಾ ಹಾಗೂ ಕಲಾತಂಡದ ಜಾನಪದ ನೃತ್ಯ, ಶಿವಾಜಿರಾವ ಅವರ ತತ್ವಪದಗಾಯನ, ಝರೆಮ್ಮಾ ಅವರ ವಚನ ಗಾಯನ, ನಾಗನಾಥ ಮಡಿವಾಳ ಅವರ ಭಕ್ತಿಗೀತೆಗಳ ಗಾಯನ, ಸರಸ್ವರಿ ಸಂಗಡಿಗರಿAದ ಸಂಪ್ರದಾಯ ಪದಗಳು, ಚಂದ್ರಪ್ಪ ಕಾಂಬಳೆ ಅವರ ಪೈತ್ರಿ ಪದ, ಸವಿತಾ ಅವರ ಬುಲಾಯಿ ಹಾಡುಗಳು, ವಿಜಯಲಕ್ಷಿಮಿ ಚಿದ್ರಿ ಅವರ ವಚನ ಗಾಯನ, ಪಾರ್ವತಿ ನಾಗನಪಲ್ಲಿ ಅವರ ಜಾನಪದ ಗಾಯನ ಸಭೀಕರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ ಜಾನಪದ ಕಲಾವಿದರು, ಕಲಾಸಕ್ತರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಮಕ್ಕಳು ಹಾಜರಿದ್ದರು.