ನಗರದ ಗುಂಪಾ ರಿಂಗ್ ರಸ್ತೆಯಲ್ಲಿ ಜರುಗಿದ ವಿಶ್ವ ರಂಗಭೂಮಿ ದಿನಾಚರಣೆ
ಬೀದರ್ : ಇಂದು ಆಧುನಿಕತೆಯ ಭರಾಟೆಯಲ್ಲಿ ರಂಗಕಲೆ ನಶಿಸಿ ಹೋಗುತ್ತಿವೆ. ರಂಗಭೂಮಿ ಉಳಿದರೆ ಮಾತ್ರ ಕಲಾವಿದರ ಉಳಿವು ಸಾಧ್ಯ ಸರ್ಕಾರಗಳು ಹೆಚ್ಚು ಅನುದಾನ ನೀಡಿ ರಂಗಭೂಮಿ ಉಳಿಸಿ ಬೆಳೆಸುವ ಕಾರ್ಯ ಮಾಡುವ ಅಗತ್ಯವಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ತಿಳಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದೊಂದಿಗೆ ನಗರದ ಗುಂಪಾ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘದ ಥೇಟರ್ ಹತ್ತಿರದ ಗುಂಪಾ ರಿಂಗ್ ರಸ್ತೆ ಮೇಲೆ ಆಯೋಜಿಸಿದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಮುಂದಿನ ಪೀಳಿಗೆಗೆ ರಂಗಭೂಮಿ ಕಲೆ ಪರಿಚಯಿಸಲು, ನಾಟಕಗಳ ಕುರಿತು ತಿಳಿಸಲು ಈ ದಿನವನ್ನು ವಿಶ್ವದ ಹಲವು ದೇಶಗಳಲ್ಲಿ ಆಚರಿಸಲಾಗುತ್ತಿದೆ ಎಂದರು.

- ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ 1961 ರಲ್ಲಿ ಪ್ಯಾರಿಸ್ ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಆಚರಿಸಬೇಕೆಂದು ಯುನೆಸ್ಕೋ ಮೊದಲನೇ ಬಾರಿಗೆ ಘೋಷಣೆ ಮಾಡಿತು. ಇಬ್ರಾಹಿಂ ಅಲ್ಕಾಜಿ ಅವರನ್ನು ರಂಗಭೂಮಿ ಪಿತಾಮಹ ಎಂದು ಕರೆಯುತ್ತಾರೆ. ನಾಟಕವಾಡುವ ಸ್ಥಳವನ್ನು ರಂಗಭೂಮಿ ಅಥವಾ ಥೇಟರ್ ಎಂದು ಕರೆಯುತ್ತಾರೆ. ಹಿಂದೆ ಸಮಾಜದಲ್ಲಿ ನಡೆಯುವ ಅನ್ಯಾಯ, ಮೋಸ ಮತ್ತು ವಂಚನೆಗಳನ್ನು ಕಲಾವಿದರು ನಾಟಕದ ಮೂಲಕ ತೋರಿಸುತಿದ್ದರು. ಸಮಾಜದಲ್ಲಿ ವಿವಿಧ ಪಾತ್ರಗಳ ಮೂಲಕ ಜಾಗೃತಿ ಮೂಡಿಸುತಿದ್ದರು. ಫೆಬ್ರವರಿ ನಂತರ ರಾಶಿ ಮುಗಿಸಿ ಮನೋರಂಜನೆಗಾಗಿ ಬೇಸಿಗೆಯಲ್ಲಿ ಪೌರಾಣಿಕ ನಾಟಕ ಮಾಡಿ ನಮ್ಮ ದೇಶದ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುತಿದ್ದರು ಎಂದು ಪ್ರತಿಪಾದಿಸಿದರು. ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ವಿಶ್ವದ 85 ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ರಾಜ್ಯದಲ್ಲಿಯೂ ನಾಟಕ ಅಕಾಡೆಮಿಯು ರಂಗಭೂಮಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಚರಿಸುತ್ತಿದೆ. ಇಂದು ಬೀದರನಲ್ಲಿ ಐದು ಜನ ರಂಗಭೂಮಿ ಕಲಾವಿದರನ್ನು ಸನ್ಮಾನಿಸಲಾಗುತ್ತಿದೆ ಎಂದರು. ಇದೇ ವೇಳೆ ದೇವಿದಾಸ ಚಿಮಕೊಡೆ ಹಾಗೂ ತಂಡದವರಿAದ ಹೆಣ್ಣು ಸಮಾಜದ ಕಣ್ಣು ಬೀದಿ ನಾಟಕ ಪ್ರದರ್ಶನ ಜರುಗಿತು.
ಕಾರ್ಯಕ್ರಮದಲ್ಲಿ ರಂಗಾಯಣ ಮಾಜಿ ನಿರ್ದೇಶಕ ಮಹೇಶ ವಿ.ಪಾಟೀಲ, ಪ್ರೊ. ಪ್ರಭುಶೆಟ್ಟಿ ಮೂಲಗೆ, ಬಸವರಾಜ ಕಟ್ಟಿಮನಿ, ಪವನ ಬಾರೆ, ಲಕ್ಷ್ಮಣ ಮಚಕುರಿ, ಶೇಷಪ್ಪ ಚಿಟ್ಟಾ, ಗಾಯಕ ಶಂಭುಲಿಂಗ ವಾಲದೊಡ್ಡಿ, ಪ್ರೊ. ಉಮಾಕಾಂತ ಪಾಟೀಲ, ವೈಜಿನಾಥ ಪಾಟೀಲ, ಮಲ್ಲಮ್ಮ ಸಂತಾಜಿ, ನಿಜಲಿಂಗಪ್ಪ ತಗಾರೆ, ಬಿ.ಜೆ.ವಿಷ್ಣುಕಾಂತ, ರಾಮಕೃಷ್ಣನ್ ಸಾಳೆ, ಶಿವಶರಣಪ್ಪ ಗಣೇಶಪುರ ಸೇರಿದಂತೆ ಹಲವರಿದ್ದರು.