ಭಾಲ್ಕಿ: ಪರಿಪೂರ್ಣತೆಯಡೆಗಿನ ಪ್ರಯಾಣವೆ ನಿಜವಾದ ಜೀವನ ದರ್ಶನ ವಾಗಿದೆ ಎಂದು ಹುಬ್ಬಳ್ಳಿಯ ವರಿಷ್ಠ ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ಸಹೋದರಿ ವೀಣಾಜಿ ಪ್ರತಿಪಾದಿಸಿದರು.
ಪಟ್ಟಣದ ಭಾಲ್ಕೇಶ್ವ ಮಂದಿರದ ಆವರಣದಲ್ಲಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಭಾಲ್ಕಿಯ ಸಹಯೋಗದಲ್ಲಿ, 89ನೇ ತ್ರೀಮೂರ್ತಿ ಮಹಾಶಿವರಾತ್ರಿ ಮಹೋತ್ಸವ ನಿಮಿತ್ಯ ಆಯೋಜಿಸಿದ್ದ ಎರಡನೇ ದಿನದ ಜೀವನ ದರ್ಶನ ಪ್ರವಚನ ಮಾಲೆಯ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ನಮ್ಮಲ್ಲಿ ಯಲ್ಲವೂ ಇದೇ, ಆದರೆ ನಾವು ಸುಖವಾಗಿಲ್ಲ. ಕಾರಣ ನಮ್ಮಲ್ಲಿರುವ ಅತಿಯಾದ ಇಚ್ಛೆ, ನಮ್ಮಲ್ಲಿರುವ ಅತಿಯಾದ ಇಚ್ಛೆಯನ್ನು ಹೊರತಳ್ಳಿ, ಇದ್ದಷ್ಟರಲ್ಲಿಯೇ ಸಂತುಷ್ಟರಾಗಿರುವುದೇ ನಿಜ ಜೀವನವಾಗಿದೆ. ಜೀವನದಲ್ಲಿ ಪ್ರಕಾಶ ತುಂಬಿ ಸದಾ ಪರಮಾತ್ಮನನ್ನು ಯಾರು ಕಾಣಲು ಪ್ರಯತ್ನಿಸುತ್ತಾರೆಯೋ ಅವರು ಸುಖಿ ಜೀವನ ಸಾಗಿಸುವರು. ಮನುಷ್ಯನ ಬಂಧನ ಮತ್ತು ಮೋಕ್ಷಕ್ಕೆ ಕಾರಣ ಮನಸ್ಸು, ಈ ಮನಸ್ಸನ್ನು ತಿಳಿ ಗೊಳಿಸಿ, ದೇವರತ್ತ ತಿರುಗಿಸಿದರೆ ಬಂಧಮುಕ್ತರಾಗಲು ಸಾಧ್ಯ. ಪ್ರಕೃತಿಯ ನಿರ್ಮಾತೃ ಆ ಪರಮಾತ್ಮನನ್ನು ತಿಳಿಯುವ ಕಾರ್ಯಾವಾಗಬೇಕು. ಪರಮಾತ್ಮನನ್ನು ಯಾವಾತ ತಿಳಿದುಕೊಳ್ಳುತ್ತಾನೋ ಅವನು ಸುಖಿ ಜೀವನ ನಡೆಸುತ್ತಾನೆ. ಅದಕ್ಕೆ ಸದಾ ಧ್ಯಾನಸ್ಥರಾಗಿ, ನಮ್ಮ ನಿಜ ಸ್ವರೂಪವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಶಶಿಕಲಾ ಸಿಂಧನಕೇರೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಭಾಲ್ಕಿಯ ಸಹೋದರಿ ರಾಧಾಜಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇವರು ಅಭೌತಿಕ ಶಕ್ತಿ, ತಾಯಿಯ ಪ್ರೀತಿಯಂತೆ ದೇವರ ಅನುಭೂತಿ, ತಾಯಿ ಪ್ರೀತಿ ನಮ್ಮ ಕಣ್ಣಿಗೆ ಕಾಣದಿದ್ದರೂ ಅದು ಅನುಭವ ಯೋಗವಾಗಿದೆ. ಹಾಗೆಯೇ ದೇವರೂ ಕೂಡ ಅನುಭವ ಯೋಗವಾಗಿದ್ದಾನೆ ಎಂದು ಹೇಳಿದರು. ಸಹೋದರ ಮಲ್ಲಿಕಾರ್ಜುನ ನುಚ್ಚಾ ಕಾರ್ಯಕ್ರಮದ ಪರಿಚಯ ಮಾಡಿಕೊಟ್ಟರು. ಇದೇವೇಳೆ ಪುಟಾಣಿ ಮಕ್ಕಳಿಂದ ನಡೆಸಿಕೊಟ್ಟ ಸ್ವರ್ಗದಲ್ಲಿ ಒಂದು ಸ್ಥಳ ಖಾಲಿ ಇದೆ ರೂಪಕ ಎಲ್ಲರ ಗಮನ ಸೆಳೆಯಿತು. ಬಂದ ಭಕ್ತಾದಿಗಳು ಸಹಸ್ರ ಜೋತಿರ್ಲಿಂಗ ದರ್ಶನ ಪಡೆದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅದ್ಯಕ್ಷ ಜಯರಾಜ ದಾಬಶೆಟ್ಟಿ, ಶಿವಕುಮಾರ ಕಲ್ಯಾಣೆ, ಪುರಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ವಂಕೆ, ದಿಲೀಪ ಘಂಟೆ, ಸಹೋದರ ಸಿದ್ರಾಮ, ಸಹೋದರ ಬಾಲಾಜಿ, ಸಹೋದರ ಶಿವಾಜಿ ಜಗತಾಪ, ಹೀರಾಚಂದ ವಾಘಮಾರೆ ಉಪಸ್ಥಿತರಿದ್ದರು. ರಾಧಾಜಿ ಸ್ವಾಗತಿಸಿದರು. ಮಲ್ಲಿಕಾರ್ಜುನ ನಿರೂಪಿಸಿದರು.
—————–