ಬೀದರ್: ಈ ತಿಂಗಳ 23 ರಂದು ಭಾನುವಾರ ಬೆಳಿಗ್ಗೆ 11. 30 ಗಂಟೆಗೆ ರಾಜ್ಯ ರಾಜ್ಯಧಾನಿ ಬೆಂಗಳೂರಿನ ಕಂಟನ್‌ಮೆಂಟ್ ರೈಲ್ವೆ ಸ್ಟೇಷನ್ ಬಳಿ ಇರುವ ವಸಂತನಗರ ಬಡಾವಣೆಯಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಒಳ ಮೀಸಲಾತಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಹೊಲೆಯ ಸಂಬಂಧಿತ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಮಾರುತಿ ಬೌದ್ದೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಏಕ ಸದಸ್ಯತ್ವ ವಿಚಾರಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ನಾಗಮೋಹನದಾಸರು ಭಾಗವಹಿಸಿ ಮನವಿ ಪತ್ರ ಸ್ವೀಕರಿಸಲು ಒಪ್ಪಿರುತ್ತಾರೆ. ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಲಗೈ ಹೊಲೆಯ ಸಂಬಂಧಿ ಉಪಜಾತಿಗಳ ಪ್ರತಿನಿಧಿಗಳು ಭಾಗವಹಿಸಿ ಆಯೋಗದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಇದರಲ್ಲಿ ಕುಲಬಾಂಧವರು ವಿಚಾರವಂತರು, ಗಣ್ಯರು, ವಕೀಲರು, ರಾಜಕಾರಣಿಗಳು, ವಿದ್ಯಾರ್ಥಿಗಳು, ಸಮಾಜದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಸಮಿತಿ ಉಪಾಧ್ಯಕ್ಷ ವಿಠಲದಾಸ ಪ್ಯಾಗೆ ಮಾತನಾಡಿ, ದೇಶದ ಪ.ಜಾ.ಗಳಲ್ಲಿನ ಉಪಜಾತಿಗಳಿಗೆ ಒಳಮೀಸಲಾತಿ ಜಾರಿ ಮಾಡಲು ಆಯಾ ರಾಜ್ಯ ಸರಕಾರಗಳು ಅಧಿಕಾರ ಹೊಂದಿವೆ ಎಂದು ಅಗಸ್ಟ 01, 2024 ರಂದು ಸುಪ್ರಿಂಕೋರ್ಟಿನ ಏಳು ನ್ಯಾಯಾಧೀಶರನ್ನೊಳಗೊಂಡು ಸಂವಿಧಾನ ಪೀಠ ತೀರ್ಪು ನಿಡುತ್ತಿದ್ದಂತೆ ಇಡಿ ಭಾರತದಾದ್ಯಂತ ರಾಜಕೀಯ ಸಂಚಲನ ಉಂಟಾಗಿದೆ ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳಲ್ಲಿ ಒಳ ಮೀಸಲಾತಿ ವಿವಾದ ವ್ಯಕ್ತವಾಗಿದೆ. ತೇಲಂಗಾಣಾ, ಕರ್ನಾಟಕ ಸರಕಾರಗಳು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ನೇಮಿಸಿ ವರದಿಯನ್ನು ಆಹ್ವಾನಿಸಿದೆ. ಕರ್ನಾಟಕದಲ್ಲಿ ಒಳಮೀಸಲಾತಿ ಸಂಬಂಧ ಸುಪ್ರಿಂಕೋರ್ಟ ತೀರ್ಪನ್ನು ಎಡಗೈ-ಬಲಗೈ (ಹೊಲೆಯ-ಮಾದಿಗ) ಸಮುದಾಯಗಳು ಸ್ವಾಗತಿಸಿವೆ ಎಂದರು.
ಮಾದಿಗ ಸಮುದಾಯದ ಸಂಘಟನೆಗಳು ಮತ್ತು ಮುಖಂಡರುಗಳು ಸದಾಶಿವ ವರದಿ ಆಧಾರದ ಮೇಲೆ ತಕ್ಷಣವೇ ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಬಲಗೈ ಸಮುದಾಯದ ಮುಖಂಡರು ಮತ್ತು ಸಂಘಟನೆಗಳು ಸದಾಶಿವ ಆಯೋಗದ ವರದಿ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ತರುವುದು ಬೇಡ. ಏಕೆಂದರೆ ಈ ವರದಿಯಲ್ಲಿರುವ ದತ್ತಾಂಶ ಅಂಕಿ ಅಂಶಗಳು ತಪ್ಪು ಮಾಹಿತಿಯಿಂದ ಕೂಡಿದ್ದು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಉಪಜಾತಿಗಳ ಶೀರುನಾಮೆಯಡಿ ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಭಾಗಗಳಲ್ಲಿ ಪರಸ್ಪರ ಏರುಪೇರು ಆಗಿದೆಯೆಂದು ಮತ್ತು ಈ ಆಯೋಗದಲ್ಲಿ ಉಲ್ಲೇಖಿಸಿರುವ 101 ಉಪಜಾತಿಗಳು ಈಗ 184ಕ್ಕೆ ಏರಿರುವುರಿಂದ ಮತ್ತೊಮ್ಮೆ ವೈಜ್ಞಾನಿಕ ವರದಿ ಉಪಜಾತಿಗಳೊಂದಿಗೆ ಸ್ಪಷ್ಟವಾಗಿ ನಮೂದಿಸಿ ಜಾರಿಗೊಳಿಸಬೇಕಾಗಿದೆ ಎಂದರು.

