ಬೀದರ್ : ಇಡೀ ಮಾನವ ಕುಲಕ್ಕೆ ಒಳಿತು ಮಾಡಿರುವ ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಹೇಳಿದರು.
ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಬೇಮಳಖೇಡಾ ಗೋರ್ಟಾ ಹಿರೇಮಠದ ಸ್ವಾಮಿಗಳಾದ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗುರು ಶಿಷ್ಯರ ನಡುವಿನ ಅವಿನಾಭಾವ ಸಂಬAಧವೇ ವೀರಶೈವ ಲಿಂಗಾಯತ ಧರ್ಮದ ಪರಂಪರೆಯಾಗಿದೆ. ಸರ್ವರ ಕಲ್ಯಾಣಕ್ಕಾಗಿಯೇ ಜನ್ಮತಾಳಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಕೊಡುಗೆ ಈ ಸಮಾಜಕ್ಕೆ ಅಪಾರವಾಗಿದೆ. ರೇಣುಕಾಚಾರ್ಯರು ತಮ್ಮ ಶಿಷ್ಯರಾದ ಅಗಸ್ತ್ಯ ಮಹರ್ಷಿಗಳಿಗೆ ತಮ್ಮ ಬೋಧನೆಗಳನ್ನು ಭೋಧಿಸಿದರೆಂದು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಕಾಣಬಹುದು ಹಾಗೂ ಲಂಕೆಯಲ್ಲಿ 3 ಕೋಟಿ ಲಿಂಗಗಳನ್ನು ಸ್ಥಾಪಿಸಿರುವುದು ಈ ಗ್ರಂಥದಿAದ ತಿಳಿದುಬಂದಿದೆ ಎಂದರು. ಹಾಗೂ ಕಲಬುರ್ಗಿ ಕೇಂದ್ರಿಯ ವಿಶ್ವ ವಿದ್ಯಾಲಯದಲ್ಲಿ ವೀರಶೈವ ಲಿಂಗಾಯತ ಅಧ್ಯಾಯನ ಕೇಂದ್ರ ಸ್ಥಾಪಿಸಬೇಕು ಮತ್ತು ಬೀದರ ನಗರದಲ್ಲಿ ರೇಣುಕಾಚಾರ್ಯರ ಸರ್ಕಲ್ ನಿರ್ಮಾಣಕ್ಕೆ ಜಾಗ ಮತ್ತು ಅನುಮತಿ ನೀಡಬೇಕೆಂದು ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸ್ವಾಮಿಜಿಗಳು ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುಂಚಿತವಾಗಿ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಮೆರವಣಿಗೆಗೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಿಶೆಟ್ಟಿ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ನಿರಗುಡಿ ಹವಾ ಮಲ್ಲಿನಾಥ ಮಹಾರಾಜರು, ದಿಶಾ ಸಮಿತಿ ಸದಸ್ಯರಾದ ಶಿವಯ್ಯ ಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ, ನಗರಸಭೆ ಸದಸ್ಯರಾದ ದಿಗಂಬರ ಮಡಿವಾಳ, ಸಿಧು ಫುಲಾರಿ, ವಿಶ್ವಲಿಂಗ ಸ್ವಾಮಿ, ವೈಜಿನಾಥ ಕಮಠಾಣೆ, ಶಿವಶರಣಪ್ಪ ವಾಲಿ, ರಾಮಕೃಷ್ಣ ಸಾಳೆ, ಈಶ್ವರ ಸಿಂಗ್ ಠಾಕೂರ್, ರವಿಂದ್ರ ಸ್ವಾಮಿ, ಮಹೇಶ್ವರ ಸ್ವಾಮಿ ಸೇರಿದಂತೆ ಸಮಾಜದ ಇತರೇ ಮುಖಂಡರು ಉಪಸ್ಥಿತರಿದ್ದರು.
******
******