ಪ್ರವಚನ ಕಾರ್ಯಕ್ರಮದಲ್ಲಿ ಡಾ. ಬಸವಲಿಂಗ ಅವಧೂತರ ಹೇಳಿಕೆ
ವಚನ ಸಾಹಿತ್ಯ ಶ್ರೇಷ್ಠ ಸಾಹಿತ್ಯ
ವಚನ ಸಾಹಿತ್ಯ ಶ್ರೇಷ್ಠ ಸಾಹಿತ್ಯ
ಬೀದರ್: ವಚನ ಸಾಹಿತ್ಯ ವಿಶ್ವದ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.
ಶ್ರೀ ಗಣೇಶ ದೇವಸ್ಥಾನ ಸಮಿತಿ ಹಾಗೂ ಗಣೇಶ ಮೈದಾನ ಅಭಿವೃದ್ಧಿ ಸಮಿತಿ ವತಿಯಿಂದ ಶ್ರಾವಣ ನಿಮಿತ್ತ ನಗರದ ಗಣೇಶ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ಜೀವನ ಮೌಲ್ಯ ಅಡಗಿದೆ. ಅವುಗಳ ಹೆಚ್ಚು ಹೆಚ್ಚು ಪ್ರಚಾರ ಆಗಬೇಕಿದೆ ಎಂದು ತಿಳಿಸಿದರು.

ಬಸವಣ್ಣ ಕೊಟ್ಟ ಲಿಂಗವಂತ ಧರ್ಮ ವೈಜ್ಞಾನಿಕ ಧರ್ಮವಾಗಿದೆ. ಲಿಂಗವಂತರು ದೇವನೊಲುಮೆಗೆ ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು. ಮೂಢ ನಂಬಿಕೆ, ಆಚರಣೆಗಳಿಂದ ದೂರ ಇರಬೇಕು ಎಂದು ಹೇಳಿದರು.
ದೇವರು ಕೊಟ್ಟ ಜೀವನವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬಾರದು. ಸರಳವಾಗಿ ಬದುಕಬೇಕು. ಉಸಿರು ಇರುವಷ್ಟು ದಿನ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳ್ವೆ ನಡೆಸಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು. ಅವರಲ್ಲಿ ಧಾರ್ಮಿಕ ಶ್ರದ್ಧೆ ಬೆಳೆಸಬೇಕು. ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ಪತ್ರಕರ್ತರಾದ ಶಶಿಕಾಂತ ಶೆಂಬೆಳ್ಳಿ, ವಿಜಯಕುಮಾರ ಬೆಲ್ದೆ, ನಾಗೇಶ ಪ್ರಭಾ, ಸಂಜೀವಕುಮಾರ ಬುಕ್ಕಾ, ಹಾಜಿ ಪಾಶಾ, ಮಾಧವ್ ಲಾಡ್ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ಸಮಿತಿಯ ಡಾ. ರಾಜಶೇಖರ ಕೌಜಲಗಿ, ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಸ್. ಪಾಟೀಲ, ಮಲ್ಲಿಕಾರ್ಜುನ ಕ್ಯಾಸಾ, ಪ್ರಭುಶೆಟ್ಟಿ ಮುದ್ದಾ, ಬಸವರಾಜ ಮಸೂದಿ ಮತ್ತಿತರರು ಇದ್ದರು. ದೇವೇಂದ್ರ ಕರಂಜೆ ನಿರೂಪಿಸಿದರು.
