ಹೃದಯಾಘಾತ ಕುರಿತು ಎಚ್ಚರಿಕೆ, ಜಾಗೃತಿ ಮೂಡಿಸಿ – ಸಂಸದ ಸಾಗರ ಖಂಡ್ರೆ
ಬೀದರ್ : ಒತ್ತಡದ ಬದುಕು, ಬದಲಾದ ಆಹಾರ ಪದ್ಧತಿ, ಜೀವನ ಶೈಲಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನಸಾಮಾನ್ಯರಲ್ಲಿ ಎದೆನೋವು, ಹೃದಯಾಘಾತ ತಡೆಯಲು ಆರೋಗ್ಯಕರ ಜೀವನಶೈಲಿ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವಂತೆ ಸಂಸದ ಸಾಗರ ಈಶ್ವರ ಖಂಡ್ರೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ದಿಶಾ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಯುವಕರಲ್ಲಿ ಜನಸಾಮಾನ್ಯರಲ್ಲಿಯೂ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ದಿನನಿತ್ಯದ ಒತ್ತಡದ ಬದುಕು, ಫಾಸ್ಟಫುಡ್ ಆಹಾರ ಹಾಗೂ ಬದಲಾದ ಜೀವನ ಶೈಲಿಯ ಹಿನ್ನೆಲೆಯಲ್ಲಿ ಎದೆನೋವು ಲಕ್ಷಣಗಳು ಹಾಗೂ ಹೃದಯಾಘಾತ ಕಂಡುಬರುತ್ತಿವೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುಧಾರಿತ ಜೀವನ ಶೈಲಿ ಬಗ್ಗೆ ಆರೋಗ್ಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಔಷಧಿಗಳು ಲಭ್ಯತೆ ಇರಬೇಕು. ಸ್ಥಳೀಯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವೈದ್ಯರು ಹಾಗೂ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸತಕ್ಕದ್ದು. ಸಾರ್ವಜನಿಕರು ಆರೋಗ್ಯ ಸಮಸ್ಯೆಗಳನ್ನು ದಾಖಲಿಸಲು ಆನ್‍ಲೈನ್ ಯೋಜನೆ ರೂಪಿಸುವಂತೆ ತಿಳಿಸಿದರು. ಅಂಬುಲೆನ್ಸಗಳ ಚಾಲಕರ ಕೊರತೆಯನ್ನು ಇನ್ನೊಂದು ವಾರದಲ್ಲಿ ಬಗೆಹರಿಸುವಂತೆ ಡಿ.ಎಚ್.ಓ. ಡಾ.ನಿರಗುಡೆ ಅವರಿಗೆ ತಿಳಿಸಿದರು.
ಬೀದಿ ಅಂಗಡಿಗಳಲ್ಲಿ ಕಲುಷಿತ ಆಹಾರ ಪದಾರ್ಥಗಳ ಮಾರಾಟ ತಡೆಯಲು ಹಾಗೂ ಹೋಟೇಲ್ ಧಾಬಾಗಳಲ್ಲಿ ಗುಣಮಟ್ಟದ ಆಹಾರ ಲಭ್ಯವಾಗುವಂತೆ ಆಹಾರ ಸುರಕ್ಷತಾ ಅಧಿಕಾರಿಗಳು ಹಠಾತ್ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಹಾಗೂ ಭೇಟಿ ನೀಡಿದ ಫೋಟೋ, ವಿಡಿಯೋ ಹಾಗೂ ವರದಿಗಳನ್ನು ಒಪ್ಪಿಸುವಂತೆ ತಿಳಿಸಿದರು.
ಗ್ರಾಮೀಣ ಹಾಗೂ ತಾಲ್ಲೂಕಾ ಪ್ರದೇಶದಲ್ಲಿ ಉತ್ತಮ ಬ್ರಾಂಡ್‍ಗಳ ನಕಲು ರೂಪದ ಕಾಸಮೆಟಿಕ್ಸ್ (ಸೌಂದರ್ಯವರ್ಧಕ) ಸಾಬೂನು ಹಾಗೂ ಆಹಾರ ಪದಾರ್ಥಗಳ ಮಾರಾಟವಾಗುತ್ತಿರುವ ಬಗ್ಗೆ ದೂರು ಬಂದಿದ್ದು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಂಸದರು ಸೂಚಿಸಿದರು.
ಔಷಧಿ ಅಂಗಡಿಗಳಲ್ಲಿ ನಶೆ ಬರುವ ಮತ್ತೇರಿಸುವ ಔಷಧಿಗಳ ಮಾರಾಟ ಕುರಿತು ಡ್ರಗ್ಸ್ ಕಂಟ್ರೋಲರ ಕ್ರಮ ಕೈಗೊಳ್ಳುವಂತೆ ಅಲ್ಲದೇ ಡ್ರಗ್ಸ್ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
ಶಾಸಕರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಅವರು ಮಾತನಾಡಿ, ಆರೋಗ್ಯ ಅಧಿಕಾರಿಗಳು ಹೆಚ್ಚೆಚ್ಚು ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಮನ್ನಾಏಖೇಳ್ಳಿ ಹತ್ತಿರ ಇತ್ತೀಚಿಗೆ ಬಾಣಂತಿಗೆ ಸೂಕ್ತ ಸಮಯದಲ್ಲಿ ಅಂಬುಲೆನ್ಸ್ ಲಭ್ಯವಾಗದ ಹಿನ್ನೆಲೆಯಲ್ಲಿ ಸಾವು ಸಂಭವಿಸಿತು. ಅಂಬುಲೆನ್ಸ್ ಚಾಲಕರ ಕೊರತೆ ತಕ್ಷಣ ನೀಗಿಸುವಂತೆ ಸೂಚಿಸಿದರು.
ಬೀದರ ರೈಲ್ವೆ ಸ್ಟೇಷನ್ ಸುತ್ತಲೂ ದಿನನಿತ್ಯ ಡ್ರಗ್ಸ್ ಮಾರಾಟ ಹೆಚ್ಚುತ್ತಿದ್ದು ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ರಾಜ್ಯ ಹೆದ್ದಾರಿಗಳಲ್ಲಿ ರಾತ್ರಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು ಲೋಕೋಪಯೋಗಿ ಇಲಾಖೆ ಪೊಲೀಸ್ ಇಲಾಖೆ ಹಾಗೂ ಆರ್.ಟಿ.ಓ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಸದರಾದ ಸಾಗರ ಈಶ್ವರ ಖಂಡ್ರೆ ಸೂಚಿಸಿದರು.
ಜನದಟ್ಟಣೆಯ ಸ್ಥಳಗಳಲ್ಲಿ ವೇಗ ಮಿತಿಗೆ ರಸ್ತೆ ತಡೆಗಳು, ರಾತ್ರಿ ಪ್ರತಿಫಲನಗೊಳ್ಳುವ ಬೋರ್ಡಗಳು ಸೇರಿದಂತೆ ಬೀದಿ ದೀಪ ಆಳವಡಿಸುವಂತೆ ತಿಳಿಸಿದರು. ಜಿಲ್ಲೆಯಲ್ಲಿ 32 ಅಪಘಾತ ಸ್ಥಳಗಳನ್ನು ಗುರುತಿಸಲಾಗಿದ್ದು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ರೈಲ್ವೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಸಂಸದರು ಕೈಗೊಂಡರು.
ರೈಲ್ವೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಸಂಸದರು ಕೈಗೊಂಡರು.
ಜಿಲ್ಲೆಯಲ್ಲಿ ಈವರೆಗೆ ಉತ್ತಮ ಮಳೆ ಬೆಳೆ ಕಂಡುಬಂದಿದ್ದು, 4.21 ಲಕ್ಷ ಹೆ. ಬಿತ್ತನೆ ಕ್ಷೇತ್ರವಿದೆ. ಈ ಪೈಕಿ 2.2 ಲಕ್ಷ ಸೋಯಾ, 1.32 ಲಕ್ಷ ತೋಗರಿ, 22 ಸಾವಿರ ಹೆ.ಉದ್ದು ಹಾಗೂ ಹೆಸರು ಬಿತ್ತಲಾಗುತ್ತಿದೆ. ರಸಗೊಬ್ಬರಗಳ ಸಮಸ್ಯೆ ಇಲ್ಲ. ಜಿಲ್ಲೆಗೆ 13723 ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದ್ದು, 9 ಸಾವಿರ ಮೆಟ್ರಿಕ್ ಟನ್ ಸರಬರಾಜು ಆಗಿದೆ. ನ್ಯಾನೋ ಯೂರಿಯಾ ಬಳಕೆಗೆ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಸಭೆಗೆ ತಿಳಿಸಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಳೆದ ವರ್ಷ ವಿಮೆ ಕಂತು ಕಟ್ಟಿದರು ಸೂಕ್ತ ವಿಮೆ ಪರಿಹಾರ ದೊರಕದ ಬಗ್ಗೆ ದೂರುಗಳು ಕೇಳಿ ಬಂದಿವೆ. ರೈತರಿಗೆ ವಿಮೆ ಪರಿಹಾರ ಹಣ ಸಂದಾಯವಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸಂಸದರು ಕೃಷಿ ಜಂಟಿ ನಿರ್ದೇಶಕರಿಗೆ ತಿಳಿಸಿದರು.
ಸಂಸದರಾದ ಸಾಗರ ಖಂಡ್ರೆ ಅವರು ದಿಶಾ ಸಮಿತಿ ಸಭೆಗೆ ಮುನ್ನ ಬೀದರ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ, ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು.
ಇದೇ ವೇಳೆ ಜಿಲ್ಲೆಯ 83 ಗ್ರಾಮ ಗ್ರಂಥಾಲಯಗಳಿಗೆ ಇಂಟರ್ನೆಟ್ ಸಂಪರ್ಕ ಹಾಗೂ ಪುಸ್ತಕ ಕಿಟ್ಟುಗಳನ್ನು ವಿತರಿಸಿ, ಗ್ರಾಮೀಣ ಮಕ್ಕಳಿಗೆ ಹಾಗೂ ಓದುಗರಿಗೆ ಜ್ಞಾನವೃದ್ಧಿಗೆ ಉಪಯುಕ್ತವಾಗುವಂತಹ ಈ ಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ದಿಶಾ ಸಮಿತಿಯ ಸದಸ್ಯರಾದ ಶಿವಯ್ಯ ಸ್ವಾಮಿ, ಜಿಲ್ಲಾದಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
****
****