ಶಿಷ್ಠಾಚಾರ ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು-ಎಂ.ನಾಗರಾಜು
ಬೀದರ್ : – ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಎಲ್ಲಾ ಸರ್ಕಾರಿ ಸಮಾರಂಭಗಳ ಆಹ್ವಾನ ಪತ್ರಿಕೆ, ಆಮಂತ್ರಣಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸುವಂತೆ ವಿಧಾನ ಪರಿಷತ್ ಶಾಸಕರು ಹಾಗೂ ಹಕ್ಕುಬಾಧ್ಯತೆ ಸಮಿತಿ ಅಧ್ಯಕ್ಷರಾದ ಎಂ.ನಾಗರಾಜು ಅವರು ತಿಳಿಸಿದರು.
ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿAದು ಜರುಗಿದ ಶಿಷ್ಠಾಚಾರ ಉಲ್ಲಂಘನೆ ಪ್ರಕರಣಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಎಲ್ಲ ಶಾಸಕರಿಗೂ ಸಮಾನ ಗೌರವ ಆದ್ಯತೆ ನೀಡತಕ್ಕದ್ದು, ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸುವುದು ಶಿಷ್ಟಾಚಾರದ ಉಲ್ಲಂಘನೆಯಾಗುತ್ತದೆ. ಶಿಷ್ಠಾಚಾರ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಮಿತಿಯು ಶಿಫಾರಸ್ಸು ಮಾಡಲಿದೆ ಎಂದರು.
ಬೀದರ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಆಹ್ವಾನ, ಆಮಂತ್ರಣ ಪತ್ರಿಕೆಗಳಲ್ಲಿ ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸಿ ಶಿಷ್ಠಾಚಾರ ಉಲ್ಲಂಘಿಸಿದ ಅನೇಕ ಪ್ರಕರಣಗಳಿವೆ. ಈ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಯಿಸಿ ವಿಚಾರಣೆ ನಡೆಸುವುದನ್ನು ತಪ್ಪಿಸಲು ನಾವೇ ಖುದ್ದಾಗಿ ಬೀದರಗೆ ಬಂದು ಸಮಿತಿ ಸಭೆ ನಡೆಸುತ್ತಿದ್ದೇವೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ವಿಧಾನ ಪರಿಷತ್ತ ಸದಸ್ಯರಿಗೂ ಸಮಾನ ಗೌರವ ನೀಡಬೇಕೆಂದು ಎಂ.ನಾಗರಾಜು ಕಟುವಾಗಿ ನುಡಿದರು.
ಶಿಷ್ಠಾಚಾರ ಪಾಲನೆ ಕುರಿತು 6 ತಿಂಗಳಿಗೊಮ್ಮೆ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಅಥವಾ ಕಾರ್ಯಾಗಾರ ಏರ್ಪಡಿಸಿ ಅರಿವು ಮೂಡಿಸಬೇಕು. ಬೀದರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿಷ್ಟಾಚಾರ ನಿರ್ವಹಣಾ ತಹಸೀಲ್ದಾರ ಹುದ್ದೆ ಖಾಲಿ ಇರುವುದರಿಂದ ಪ್ರಥಮ ದರ್ಜೆ ಸಹಾಯಕರು ನಿರ್ವಹಿಸುತ್ತಿದ್ದು ಅವರು ಜಾಗರೂಕತೆಯಿಂದ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂದರು.
ವಿಧಾನ ಪರಿಷತ್ ಶಾಸಕರಾದ ಭೀಮರಾವ್ ಪಾಟೀಲ ಅವರಿಗೆ ಕಳೆದ 3 ವರ್ಷಗಳಿಂದಲೂ ಕಚೇರಿ ಕೊಠಡಿ ನೀಡದೇ ಇರುವುದಕ್ಕೆ ತೀವ್ರ ಆಕ್ಷೇಪ ಹಾಗೂ ಅತೃಪ್ತಿ ವ್ಯಕ್ತಪಡಿಸಿದ ಸಮಿತಿಯ ಎಲ್ಲ ಸದಸ್ಯರು ಹಳೆಯ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾದಿಕಾರಿಗಳು ಈ ಕುರಿತು ಕ್ಷಮಾರ್ಪಣೆ ಕೇಳಿದ್ದು ಈವರೆಗೂ ಅವರಿಗೆ ಔರಾದ್‌ನಲ್ಲಿ ಕೊಠಡಿ ಒದಗಿಸಲ್ಲವೆಂದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸದ್ಯ ಕೊಠಡಿ ನೀಡುವ ಪ್ರಕ್ರಿಯೇ ಜಾರಿಯಲ್ಲಿದೆ, ಔರಾದ ಪಟ್ಟಣದಲ್ಲಿ ಪುರಸಭೆ ಅನುದಾನದಲ್ಲಿ ಕೊಠಡಿ ಸಿದ್ಧಗೊಳ್ಳುತ್ತಿದೆ ಶೀಘ್ರದಲ್ಲೇ ಕೊಠಡಿ ಸಿದ್ಧಗೊಳ್ಳಲಿದೆಯೆಂದು ತಿಳಿಸಿದರು.
ಬೀದರನ ಇನ್ನೋರ್ವ ವಿಧಾನ ಪರಿಷತ್ ಸದಸ್ಯ ಡಾ.ಎಂ.ಜಿ.ಮೂಳೆ ಅವರಿಗೂ ಸಹ ಕೊಠಡಿಯ ಅಗತ್ಯವಿದೆ ಎಂದು ಅಧ್ಯಕ್ಷ ನಾಗರಾಜು ತಿಳಿಸಿದರು. ಬಸವಕಲ್ಯಾಣದ ಕೆಲ ಕಾಮಗಾರಿ ಉದ್ಘಾಟನೆಗಳಲ್ಲಿ ಅಧಿಕಾರಿಗಳು ತಮ್ಮನ್ನು ಆಹ್ವಾನಿಸದೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎಂ.ಜಿ.ಮೂಳೆ ತಮ್ಮ ಅಹವಾಲು ತಿಳಿಸಿದರು.
ಬಾಗಲಕೋಟೆಯ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ ಅವರು ಮಾತಮಾಡಿ, ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆ, ಅಹವಾಲುಗಳನ್ನು ಕೇಳಲು ಕಚೇರಿಯ ಅಗತ್ಯತೆ ಇರುತ್ತದೆ. ವಿಧಾನ ಪರಿಷತ್ ಸದಸ್ಯರಿಗೆ ಅಧಿಕಾರಿಗಳು ಅಸಡ್ಡೆ ತೋರಿಸುವುದು ಸರಿಯಲ್ಲ, ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾನೂನಿನ್ವಯ ಆತ್ಮಸಾಕ್ಷಿಯಿಂದ ಕೆಲಸ ನಿರ್ವಹಿಸಬೇಕೆಂದರು.
ಈ ಸಭೆಯಲ್ಲಿ ಹಕ್ಕು ಬಾದ್ಯತೆ ಸಮಿತಿಯ ಇತರೇ ಸದಸ್ಯರುಗಳಾದ ಡಾ.ತಳವಾರ, ಕೇಶವ ಪ್ರಸಾದ, ಭೀಮರಾವ್ ಪಾಟೀಲ, ಜಗದೇವ ಗುತ್ತೇದಾರ, ರಾಮಾಜಿರಾವ್ ಸೇರಿದಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
*****