ಅಪರ ಜಿಲ್ಲಾಧಿಕಾರಿ ಶೀಲವಂತ ಅವರ ತಾಳ್ಮೆ, ಶಾಂತತೆ ಸಂಯಮದ ಕಾರ್ಯವೈಖರಿ ಶ್ಲಾಘನೀಯ – ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ : ಬೀದರ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಸರಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರ ತಾಳ್ಮೆ, ಸಂಯಮ, ಶಾಂತತೆಯ ಕಾರ್ಯವೈಖರಿ, ಸಿಬ್ಬಂದಿಗಳ ಜೊತೆ ಉತ್ತಮ ಸಂಬಂಧದ ಒಡನಾಟದ ಸೇವೆಯು ಶ್ಲಾಘನೀಯವೆಂದು ಜಿಲ್ಲಾಧಿಕಾರಿ ಶಿಲ್ಪಾ ಶಮಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಗೆ ಅಪರ ಜಿಲ್ಲಾಧಿಕಾರಿಯಾಗಿ ನಿರ್ಗಮಿಸುತ್ತಿರುವ ಶಿವಕುಮಾರ ಶೀಲವಂತ ಇವರಿಗೆ ಬೀಳ್ಕೊಡುಗೆ ಹಾಗೂ ನೂತನವಾಗಿ ಆಗಮಿಸಿರುವ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಂದಾಯ ಇಲಾಖೆಯ ವಿವಿಧ ಸ್ತರದ ಸಿಬ್ಬಂದಿಗಳು ಹಾಗೂ ಜಿಲ್ಲಾಧಿಕಾರಿಗಳ ನಡುವೆ ಶಿವಕುಮಾರ ಶೀಲವಂತ ಅವರು ಸೇತುವೆಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರತಿ ತಿಂಗಳು ತಾವು ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸುತ್ತಾರೆ. ಆದರೆ ಅಪರ ಜಿಲ್ಲಾಧಿಕಾರಿಯಾಗಿ ಶಿವಕುಮಾರ ಶೀಲವಂತ ಅವರು ವಾರಕ್ಕೊಮ್ಮೆ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಪ್ರಗತಿ ಮಾಹಿತಿ ಪಡೆಯುತ್ತಿದ್ದರು. ಅನೇಕ ಒತ್ತಡ ಸಂದರ್ಭಗಳನ್ನು ಸಂಯಮದಿAದ ತಾಳ್ಮೆಯಿಂದ ಬಗೆಹರಿಸಿದ್ದಾರೆ. ಅವರ ಶಾಂತತೆಯ ಸ್ವಭಾವ ಮೆಚ್ಚುವಂತದ್ದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಸುರೇಖಾ ಅವರು ಮಾತನಾಡಿ, ಅಪರ ಜಿಲ್ಲಾದಿಕಾರಿಗಳ ಮಾರ್ಗದರ್ಶನ ಸಿಬ್ಬಂದಿಗಳ ಜೊತೆ ಒಡನಾಟ ನಮ್ಮೆಲ್ಲರಿಗೂ ಮಾದರಿಯಾಗಿದೆಯೆಂದರು. ತಾವು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವಾಗ ಉತ್ತಮ ಸಲಹೆ ಸೂಚನೆಗಳನ್ನು ನೀಡಿ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುತ್ತಿದ್ದರೆಂದು ತಿಳಿಸಿದರು.
ನೂತನ ಅಪರ ಜಿಲ್ಲಾದಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮಾತನಾಡಿ, ಬೀದರ ಜಿಲ್ಲೆಯಲ್ಲಿ ತಾವು 5 ವರ್ಷ ಪಶು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದು, ಪ್ರೊಬೇಷನರಿ ತಹಸೀಲ್ದಾರಾಗಿಯೂ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯ ಬಗ್ಗೆ ತಮಗೆ ಅನುಭವವಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಕುಮಾರ ಶೀಲವಂತ ಅವರು ಬೀದರ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸಧ್ಯದ ಜಿಲ್ಲಾಧಿಕಾರಿಳ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತದ ಅನುಭವ ದೊರೆತ್ತಿದೆಯೆಂದರು. ಜಿಲ್ಲಾಧಿಕಾರಿಗಳ ಸೂಕ್ಷö್ಮ ಹಾಗೂ ಪಾರದರ್ಶಕ ಆಡಳಿತದ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶೀಲವಂತ ಅವರು ಕಳೆದೊಂದು ವರ್ಷದಲ್ಲಿ ವಿವಿಧ ರೀತಿಯ ಆಡಳಿತ ಸುಧಾರಣಾ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾಡಳಿತ ಭವನದ ಸ್ಥಳಾಂತರ, ಕಡತ ನಿರ್ವಹಣೆ, ಆಧಾರ ಸೀಡಿಂಗ್, ಕಂದಾಯ ಗ್ರಾಮ, ವಸತಿ ನಿಲಯಗಳ ಕಟ್ಟಡ ಮಂಜೂರು ಮುಂತಾದ ಅನೇಕ ಸುಧಾರಣಾ ಕ್ರಮ, ಮಹಿಳೆ ಹಾಗೂ ಮಕ್ಕಳ ಮೇಲೆ ಅಪಾರ ಕಾಳಜಿ ಹೊಂದಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಹಾಗೂ ಬೀದರ ಸಹಾಯಕ ಆಯುಕ್ತರಾದ ಮುಕುಲ್ ಜೈನ್, ಎಂ.ಡಿ.ಶಕೀಲ್, ಪ್ರೊ. ಐಎಎಸ್ ಅಧಿಕಾರಿಗಳಾದ ರಮ್ಯಾ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
****