ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿ ಆಗಲಿ – ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್: ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಬೀದರ್ ತಾಲ್ಲೂಕಿನ ಚಿಕ್ಕಪೇಟೆ ಹತ್ತಿರದ ಬೀದರ್-ಕಲಬುರಗಿ-ಯಾದಗಿರಿ ಹಾಲು ಒಕ್ಕೂಟದ ಡೇರಿಯಲ್ಲಿ ಬುಧವಾರ ರಾಜ್ಯಸಭೆ ಸದಸ್ಯ ವೀರೇಂದ್ರ ಹೆಗ್ಗಡೆ ಅವರ ರೂ. 1.50 ಕೋಟಿ ಸಂಸದರ ನಿಧಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ಟೇನ್‍ಲೆಸ್ ಸ್ಟೀಲ್ ಹಾಲಿನ ಕ್ಯಾನ್ ಹಾಗೂ ಅತ್ಯಾಧುನಿಕ ಹಾಲು ಸಂಗ್ರಹಣ ಉಪಕರಣ ವಿತರಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು ಸೌಲಭ್ಯಗಳ ಪ್ರಯೋಜನ ಪಡೆಯಬೇಕು. ರೈತ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿ ಹಾಗೂ ಹಾಲು ಉತ್ಪಾದನೆ ಹೆಚ್ಚಳಕ್ಕೆ ನಿರಂತರ ಶ್ರಮಿಸುತ್ತಿದೆ ಎಂದು ಬೀದರ್-ಕಲಬುರಗಿ-ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರೂ ಆದ ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ತಿಳಿಸಿದರು.

ರೈತರು ಅಧಿಕ ಹಾಲು ಉತ್ಪಾದನೆಯತ್ತ ಗಮನ ಹರಿಸಬೇಕು. ಒಕ್ಕೂಟಕ್ಕೆ ಹಾಲು ಕೊಟ್ಟು ಆರ್ಥಿಕ ಸ್ಥಿತಿ ಎತ್ತರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೀದರ್ ಜಿಲ್ಲಾ ಹೈನು ಅಭಿವೃದ್ಧಿ ಯೋಜನೆ ನಿರ್ದೇಶಕ ಡಾ. ಎಸ್.ಎಸ್. ಹಿರೇಮಠ ಯೋಜನೆ ಕುರಿತು ಮಾಹಿತಿ ನೀಡಿದರು.
110 ಸಂಘಗಳಿಗೆ ಹಾಲಿನ ಕ್ಯಾನ್ ಹಾಗೂ 84 ಸಂಘಗಳಿಗೆ ಹಾಲು ಸಂಗ್ರಹಣ ಉಪಕರಣ ವಿತರಿಸಲಾಯಿತು.
ಒಕ್ಕೂಟದಿಂದ ಡೇರಿಗೆ ಸುತ್ತುಗೋಡೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಒಕ್ಕೂಟದ ನಿರ್ದೇಶಕರಾದ ಭೀಮರಾವ್ ಬಳತೆ, ನಾಗರಾಜ ಪಾಟೀಲ, ಸಂತೋಷಕುಮಾರ ಪಾಟೀಲ, ಬೀದರ್ ಡೇರಿ ಅಧಿಕಾರಿಗಳಾದ ಡಾ. ಅಂಕಿತಾ, ಡಾ. ಪ್ರವೀಣ್ ಮತ್ತಿತರರು ಇದ್ದರು.
