ಬೈಕ್ ಸವಾರರಿಗೆ ಹೆಲ್ಮೇಟ್, ಹುಟ್ಟೂರಿಗೆ ಸಿಸಿ ಟಿವಿ ಕ್ಯಾಮೆರಾ ಕೊಡುಗೆ
ಬೀದರ್: ತಾಲ್ಲೂಕಿನ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ ಬೈಕ್ ಸವಾರರಿಗೆ ಹೆಲ್ಮೇಟ್ ಹಾಗೂ ಹುಟ್ಟೂರಿಗೆ ಸಿಸಿ ಟಿವಿ ಕ್ಯಾಮೆರಾ ಕೊಡುಗೆಯಾಗಿ ನೀಡುವ ಮೂಲಕ ತಮ್ಮ ಜನ್ಮದಿನವನ್ನು ಈಚೆಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
33ನೇ ಜನ್ಮದಿನದ ಪ್ರಯುಕ್ತ ತಮ್ಮ ಹುಟ್ಟೂರು ಯಾಕತಪುರದಲ್ಲಿ 33 ಬೈಕ್ ಸವಾರರಿಗೆ ಹೆಲ್ಮೇಟ್ ಉಚಿತವಾಗಿ ವಿತರಿಸಿದರು. ಗ್ರಾಮಕ್ಕೆ ವೈಯಕ್ತಿಕವಾಗಿ 3 ಸಿಸಿ ಟಿವಿ ಕ್ಯಾಮೆರಾಗಳನ್ನು ಕೊಡುಗೆಯಾಗಿ ಕೊಟ್ಟರು.
ರಸ್ತೆ ಸುರಕ್ಷತೆ ಜಾಗೃತಿ ಹಾಗೂ ಜನರ ಜೀವ ಉಳಿಸಲು ಬೈಕ್ ಸವಾರರಿಗೆ ಹೆಲ್ಮೇಟ್ ವಿತರಿಸಲಾಗಿದೆ. ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸಲು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಅಳವಡಿಸುವುದಕ್ಕಾಗಿ ಸಿಸಿ ಟಿವಿ ಕ್ಯಾಮೆರಾ ಕೊಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಪಿಎಸ್‍ಐ ನಂದಿನಿ ಅವರು, ನರಸಪ್ಪ ಅವರು ಸಾಮಾಜಿಕ ಕಾರ್ಯಗಳೊಂದಿಗೆ ಜನ್ಮದಿನ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಪಿಡಿಒ ರಾಮಣ್ಣ, ಪಂಚಾಯಿತಿ ಸದಸ್ಯ ಸಲೀಮೊದ್ದಿನ್, ಪ್ರಮುಖರಾದ ಪಂಢರಿ ವರ್ಮಾ, ಚಂದ್ರಶೇಖರ ಪಾಟೀಲ, ಸುಧಾಕರ ರಾಜಗೀರಾ, ಅಶೋಕ ಜಾನಕನೋರ ಮತ್ತಿತರರು ಇದ್ದರು.
