—–
ದಕ್ಷಿಣ ಕ್ಷೇತ್ರ ಅನುದಾನ ತಾರತಮ್ಯ ನಿವಾರಿಸಿಬೀದರ್: ಸಂಪೂರ್ಣ ಹಳ್ಳಿಗಳಿಂದಲೇ ಕೂಡಿರುವ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ, ತಾರತಮ್ಯ ಸರಿಪಡಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುವು ಮಾಡುಕೊಡುವಂತೆ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ಅವರಿಗೆ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮನವಿ ಮಾಡಿದ್ದಾರೆ.
ನಗರದ ಜಿಪಂ ಕಚೇರಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ಪ್ರೊ.ಗೋವಿಂದರಾವ್ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ ಡಾ. ಬೆಲ್ದಾಳೆ ಅವರು, ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಪೈಕಿ ಹಳ್ಳಿಗಳಿಂದ ಕೂಡಿರುವ ಏಕೈಕ ದಕ್ಷಿಣ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲಿ ಭಾರಿ ತಾರತಮ್ಯ ಆಗುತ್ತಿದೆ. ಹೀಗಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ. ಸಮಿತಿಯು ಕ್ಷೇತ್ರಕ್ಕೆ ಆಗುತ್ತಿರುವ ಈ ಅನ್ಯಾಯ ಸರಿಪಡಿಸಲು ಕ್ರಮ ಕೈಗೊಂಡು ಪ್ರಗತಿಗೆ ಹೊಸ ಆಯಾಮ ನೀಡಬೇಕು ಎಂದು ಕೋರಿದ್ದಾರೆ.

ದಕ್ಷಿಣ ಕ್ಷೇತ್ರ ಹಳ್ಳಿಗಳಿಂದ ಕೂಡಿರುವ ಜೊತೆಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಕ್ಷೇತ್ರದಲ್ಲಿ ೯೭ ಗ್ರಾಮ, ೨೦ ತಾಂಡಾಗಳಿವೆ. ಬೀದರ್ ಹಾಗೂ ಚಿಟಗುಪ್ಪಾ ತಾಲೂಕುಗಳಲ್ಲಿ ಕ್ಷೇತ್ರವು ಹಂಚಿಕೆಯಾಗಿದೆ. ಒಟ್ಟು ೩೫ ಗ್ರಾಮ ಪಂಚಾಯಿತಿಗಳಿವೆ. ಇಲ್ಲಿ ಹೆಚ್ಚಿನ ಜನರು ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿದ್ದು, ಬಡತನ ರೇಖೆ ಕೆಳಗಿರುವವರ ಪ್ರಮಾಣ ಶೇ.೬೫ಕ್ಕೂ ಅಧಿಕವಿದೆ. ತಲಾ ಆದಾಯ ಬಹಳ ಕಡಿಮೆಯಿದೆ. ಕ್ಷೇತ್ರ ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲಿದ್ದರೂ ಸುಪರ್ ಸ್ಪೆಷಾಲಿಟಿ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ ಇಲ್ಲಿಲ್ಲ. ಆರೋಗ್ಯ ವ್ಯವಸ್ಥೆ ಸಾಕಷ್ಟು ಸುಧಾರಣೆಯಾಗಬೇಕಿದೆ. ಸರ್ಕಾರಿ ಪಾಲಿಟೆಕ್ನಿಕ್ ಸೇರಿ ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣದ ವ್ಯವಸ್ಥೆ ಇಲ್ಲ. ನೀರಾವರಿ ಪ್ರದೇಶ ಕೇವಲ ಶೇ.೯ರಷ್ಟಿದ್ದು, ಬಹುತೇಕರು ಮಳೆಯಾಶ್ರಿತ ಕೃಷಿ ಅವಲಂಬಿಸಿದ್ದಾರೆ. ಸಾರ್ವಜನಿಕ ಉದ್ಯಮಗಳಿಲ್ಲದ ಕಾರಣ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ, ಪ್ರತಿ ವರ್ಷ ಅನೇಕ ಕಾರ್ಮಿಕರು ಗುಳೆ ಹೋಗುವುದು ಸಾಮಾನ್ಯವಾಗಿದೆ. ಕ್ಷೇತ್ರದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹೆಚ್ಚಿನ ಅನುದಾನ, ವಿಶೇಷ ಯೋಜನೆಗಳ ಜಾರಿ ಅಗತ್ಯವಾಗಿದೆ ಎಂದು ಗಮನ ಸೆಳೆದಿದ್ದಾರೆ.
ಕ್ಷೇತ್ರದಲ್ಲಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಇಲ್ಲ. ಹೀಗಾಗಿ ರಾಜ್ಯ, ಕೇಂದ್ರದ ಅನೇಕ ಯೋಜನೆಗಳಡಿ ಬೇರೆ ಕ್ಷೇತ್ರಗಳಿಗೆ ಬರುವ ವಿಶೇಷ ಅನುದಾನ ದಕ್ಷಿಣ ಕ್ಷೇತ್ರಕ್ಕೆ ಸಿಗುತ್ತಿಲ್ಲ. ಅಭಿವೃದ್ಧಿ ಸೂಚ್ಯಂಕದ ಹಳೇ ಮಾನದಂಡದ ಕಾರಣದಿಂದ ಕೆಕೆ ಆರ್ ಡಿಬಿ ಅನುದಾನ ಸಹ ಬಹಳ ಕಡಿಮೆ ಬರುತ್ತಿದೆ. ಜಿಲ್ಲೆಯ ಔರಾದ್ ಕ್ಷೇತ್ರಕ್ಕೆ ಪ್ರತಿ ವರ್ಷ ಕೆಕೆಆರ್ ಡಿಬಿಯಿಂದ ೮೦-೯೦ ಕೋಟಿ ರೂ., ಭಾಲ್ಕಿ- ಬಸವಕಲ್ಯಾಣ ಹಾಗೂ ಹುಮನಾಬಾದ್ ಕ್ಷೇತ್ರಕ್ಕೆ ೬೦-೭೦ ಕೋಟಿ ರೂ. ಅನುದಾನ ಬಂದರೆ ದಕ್ಷಿಣ ಕ್ಷೇತ್ರಕ್ಕೆ ಕೇವಲ ೨೬-೨೮ ಕೋಟಿ ರೂ. ದೊರಕುತ್ತಿದೆ. ಅತ್ಯಂತ ಹಿಂದುಳಿದ, ಸಂಪೂರ್ಣ ಹಳ್ಳಿಗಳನ್ನೇ ಹೊಂದಿರುವ ಕ್ಷೇತ್ರಕ್ಕೆ ಅತೀ ಕಡಿಮೆ ಅನುದಾನ ಬರುತ್ತಿರುವ ಕಾರಣ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ. ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಜನರ ಆರ್ಥಿಕ ಸ್ಥಿತಿ ಸದೃಢಗೊಳಿಸಲು, ಉತ್ತಮ ಶೈಕ್ಷಣಿಕ, ಆರೋಗ್ಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದ ಬಡ, ಹಿಂದುಳಿದ, ರೈತರ ಮೇಲೆ ಆಗುತ್ತಿರುವ ಘೋರ ಅನ್ಯಾಯ ಸರಿಪಡಿಸಲು ಆಗ್ರಹಿಸಿದ್ದಾರೆ.

ಈವರೆಗಿನ ಅನ್ಯಾಯ ಸರಿಪಡಿಸುವ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕೆಕೆಆರ್ ಡಿಬಿ ಮೈಕ್ರೋ ಯೋಜನೆಯಡಿ ಪ್ರತಿ ವರ್ಷ ೧೦೦ ಕೋಟಿ ರೂ.ಅನುದಾನ ಒದಗಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರುವ ಕೆಕೆಆರ್ ಡಿಬಿ ಮ್ಯಾಕ್ರೋ ಯೋಜನೆ ನಿಧಿಯಲ್ಲಿ ಸಹ ಯಾವುದೇ ಕ್ಷೇತ್ರಕ್ಕೆ ತಾರತಮ್ಯ ಆಗದಂತೆ ಅನುದಾನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಜನರ ಹಿತ, ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅನ್ಯಾಯ ಹಾಗೂ ತಾರತಮ್ಯವನ್ನು ನಿವಾರಿಸಲು ಸರ್ಕಾರಕ್ಕೆ ಆದಷ್ಟು ಬೇಗ ಶಿಫಾರಸ್ಸು ಮಾಡಲು ಒತ್ತಾಯಿಸಿದರು.
========

ಹಳೆಯ ಮಾನದಂಡ ಬದಲಾಗಲಿ
೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಡೆದ ಸಂದರ್ಭದಲ್ಲಿ ದಕ್ಷಿಣ ಕ್ಷೇತ್ರ ಹೊಸದಾಗಿ ಉದಯವಾಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ೨೦೦೨ರಲ್ಲಿ ಡಾ.ಡಿ.ಎಂ.ನಂಜುಂಡಪ್ಪ ಅವರು ೩೫ ಸೂಚ್ಯಂಕಗಳನ್ನು ಪರಿಶೀಲಿಸಿ ಸಮಗ್ರ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು. ಈ ವರದಿ ಆಧರಿಸಿ ಅತ್ಯಂತ ಹಿಂದುಳಿದ, ಅತೀ ಹಿಂದುಳಿದ ಹಾಗೂ ಹಿಂದುಳಿದ ತಾಲೂಕು ಎಂದು ಗುರುತಿಸಿ ಇವುಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು
ಶಿಫಾರಸ್ಸು ಮಾಡಿದ್ದರು. ಡಾ. ನಂಜುಂಡಪ್ಪ ವರದಿ ಸಲ್ಲಿಸಿದ ವೇಳೆ ಜಿಲ್ಲಾ ಕೇಂದ್ರ ಹೊಂದಿರುವ ಬೀದರ್ ಕ್ಷೇತ್ರ ಒಂದೇ ವಿಧಾನಸಭೆಯಾಗಿತ್ತು. ಇದು ಜಿಲ್ಲಾ ಹಾಗೂ ನಗರ ಪ್ರದೇಶವಾದ ಕಾರಣ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಕೇವಲ ಹಿಂದುಳಿದ ಪಟ್ಟಿಗೆ ಸೇರಿಸಲಾಗಿತ್ತು. ೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಬೀದರ್ ದಕ್ಷಿಣ ಕ್ಷೇತ್ರ ಹೊಸದಾಗಿ ಉದಯವಾದರೂ ಇದನ್ನು ಹಳೇ ಅಭಿವೃದ್ಧಿ ಸೂಚ್ಯಂಕದ ಆಧಾರದಲ್ಲೇವಬೀದರ್ ನಗರ ಪ್ರದೇಶದ ಲೆಕ್ಕಾಚಾರದಲ್ಲಿ ಗುರುತಿಸಿದ್ದರಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಸರ್ಕಾರದಿಂದ ಅನುದಾನ ಪಡೆಯುವಲ್ಲಿ ಸಾಕಷ್ಟು ಅನ್ಯಾಯ, ತಾರತಮ್ಯ ಎದುರಿಸುತ್ತಿದೆ. ಕ್ಷೇತ್ರ ಉದಯವಾಗಿ ೧೭ ವರ್ಷಗಳಾದರೂ ಹಳೆಯ ಅಭಿವೃದ್ಧಿ ಸೂಚ್ಯಂಕ ಮಾನದಂಡ ಪರಿಗಣನೆಯಿಂದ
ಅನುದಾನದ ತಾರತಮ್ಯವಾಗಿ ಸಂಪೂರ್ಣ ಹಳ್ಳಿಗಳಿಂದ ಕೂಡಿರುವ ಈ ಕ್ಷೇತ್ರ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಬಿದ್ದಿದೆ. ಈ ಸೂಚ್ಯಂಕ ಮಾನದಂಡ ಬದಲಿಸಿ ಕ್ಷೇತ್ರಕ್ಕೆ ಅತ್ಯಂತ ಹಿಂದುಳಿದ ಪಟ್ಟಿಗೆ ಸೇರಿಸಿ ಅಭಿವೃದ್ಧಿಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಡಾ.ಬೆಲ್ದಾಳೆ ಸಮಿತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
=======
ಕ್ಷೇತ್ರದ ಜನರು, ಜನಪ್ರತಿನಿಧಿಗಳು ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ, ಅನ್ಯಾಯ ಸರಿಪಡಿಸಲು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ. ಪ್ರತಿಭಟನೆ ಸಹ ಮಾಡುತ್ತಿದ್ದಾರೆ. ಇಲ್ಲಿನ ಸ್ಥಿತಿಗತಿ ಆಧರಿಸಿ ಹೊಸ ಅಭಿವೃದ್ಧಿ ಸೂಚ್ಯಂಕ ಸಿದ್ಧಪಡಿಸುವ ವೇಳೆ ಸಮಿತಿಯು ಹಳ್ಳಿಗಳಿಂದ ಕೂಡಿದ ದಕ್ಷಿಣ ಕ್ಷೇತ್ರಕ್ಕೆ ನ್ಯಾಯ ಒದಗಿಸಬೇಕು.
-ಡಾ.ಶೈಲೇಂದ್ರ ಬೆಲ್ದಾಳೆ
ಬೀದರ್ ದಕ್ಷಿಣ ಶಾಸಕರು
————————
