ಯದಲಾಪುರ ಗ್ರಾ.ಪಂ. ಅಧ್ಯಕ್ಷರಾಗಿ ಗುಣವಂತರಾವ್ ಪಾಟೀಲ್ ಆಯ್ಕೆ
ಬೀದರ್: ತಾಲ್ಲೂಕಿನ ಯದಲಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಗುಣವಂತರಾವ್ ಪಾಟೀಲ ಅಯಾಸಪುರ ಹಾಗೂ ಉಪಾಧ್ಯಕ್ಷರಾಗಿ ಕಾವೇರಿ ಪ್ರಶಾಂತ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಎರಡನೇ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ 21 ಸದಸ್ಯರ ಪೈಕಿ 17 ಸದಸ್ಯರ ಬೆಂಬಲದೊಂದಿಗೆ ಪಾಟೀಲ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾವೇರಿ ಪ್ರಶಾಂತ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅವರ ಆಯ್ಕೆ ಅವಿರೋಧವಾಗಿ ನಡೆಯಿತು.
ಚುನಾವಣಾಧಿಕಾರಿಯಾಗಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಾಟೀಲ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಿಸುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸತ್ಕರಿಸಿದರು.

ಯದಲಾಪುರ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ಪಂಚಾಯಿತಿ ವ್ಯಾಪ್ತಿಯ ಅರ್ಹರಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸಲಾಗುವುದು. ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ದಾರಿದೀಪ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಒತ್ತು ಕೊಡಲಾಗುವುದು ಎಂದು ನೂತನ ಅಧ್ಯಕ್ಷ ಗುಣವಂತರಾವ್ ಪಾಟೀಲ ಹೇಳಿದರು.
ಪಿಡಿಒ ಸುನೀತಾ ಬನ್ನೇರ್ ಸಹಾಯಕ ಚುನಾವಣಾಧಿಕಾರಿಯಾಗಿದ್ದರು. ಮುಖಂಡರಾದ ಆಕಾಶ ಪಾಟೀಲ, ಸಂತೋಷ ಪಾಟೀಲ, ಯೋಗೇಂದ್ರ ಯದಲಾಪುರೆ, ರಮೇಶ ಪಾಟೀಲ, ಹಣಮಂತರಾವ್ ಪಾಟೀಲ, ಭೀಮರಾವ್ ಪೊಲೀಸ್ ಪಾಟೀಲ, ಸುಧಾಕರ ಕೋಟೆ, ಪ್ರದೀಪ್ ಕೋಟೆ, ಸ್ವಾಮಿದಾಸ, ಶಿವಕುಮಾರ ತೂಗಾ, ಉಸ್ಮಾನ್, ಮಹೆಬೂಬ್ ಪಟೇಲ್, ಸಿದ್ದು ಹೊಸಳ್ಳಿ, ದತ್ತು ಹಡಪದ, ಗೌಸಿಯಾ ಬೇಗಂ, ಅನ್ಸರ್ ಬೇಗ್, ಜಾವೀದ್, ಜಗನ್ನಾಥ ಯಾಕತಪುರೆ, ಶಿವಕುಮಾರ ಸ್ವಾಮಿ, ನಾಗಶೆಟ್ಟಿ ಚಟ್ನಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಗಣ್ಯರು ಇದ್ದರು.
