ಕನ್ನಡ ಶಾಲೆಗಳ ಉಳಿವಿಗೆ ಹೋರಾಟ
ಬೀದರ್: ಕನ್ನಡ ಶಾಲೆಗಳ ಉಳಿವಿಗೆ ಬರುವ ದಿನಗಳಲ್ಲಿ ಹೋರಾಟ ನಡೆಸಲು ಕನ್ನಡ ಜನ ಜಾಗೃತಿ ಸಮಿತಿಯ ಜಿಲ್ಲಾ ಘಟಕ ಸೋಮವಾರ ಇಲ್ಲಿ ನಿರ್ಣಯಿಸಿತು.
ಜಿಲ್ಲಾ ಕನ್ನಡ ಭವನದಲ್ಲಿ ಕನ್ನಡ ಜನ ಜಾಗೃತಿ ಸಮಿತಿಯ ಜಿಲ್ಲಾ ಘಟಕದ ಮುಂದಾಳತ್ವದಲ್ಲಿ ನಡೆದ ಕನ್ನಡ ಪರ ಸಂಘಟನೆಗಳ ಸಭೆಯಲ್ಲಿ ಈ ಕುರಿತು ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.
ಕನ್ನಡ ಪರ ಸಂಘಟನೆಗಳ ರಾಜ್ಯ ಪ್ರಮುಖರ ಭೇಟಿಗೆ ಶೀಘ್ರದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ನಿಯೋಗ ಬೆಂಗಳೂರಿಗೆ ಒಯ್ಯಲಾಗುವುದು
ಎಂದು ಸಭೆಯ ನೇತೃತ್ವ ವಹಿಸಿದ್ದ ಕನ್ನಡ ಜನ ಜಾಗೃತಿ ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.
ಕನ್ನಡ ಪರ ಸಂಘಟನೆಗಳ ಪ್ರಮುಖರಿಗೆ ಕನ್ನಡ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮನವರಿಕೆ ಮಾಡಲಾಗುವುದು. ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ನೆಲ, ಜಲ, ಸಂಸ್ಕøತಿಯ ಉಳಿವಿಗೆ ಕನ್ನಡ ಶಾಲೆಗಳ ಉಳಿವು ಬಹಳ ಅವಶ್ಯಕವಾಗಿದೆ ಎಂದು ತಿಳಿಸಿದರು.
ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ನಡೆಸುವ ಎಲ್ಲ ಹೋರಾಟಗಳಿಗೆ ಪರಿಷತ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ, ಜಯ ಕರ್ನಾಟಕ ಜನ ಪರ ವೇದಿಕೆಯ ಸಂಜು ಡೊಳ್ಳೆ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಪೀಟರ್ ಚಿಟಗುಪ್ಪ, ಕನ್ನಡ ಸೇನೆ ಕರ್ನಾಟಕದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಸ್ವಾಮಿ ನಿರ್ಣಾ, ಸಾಹಿತಿಗಳಾದ ಎಸ್.ಎಂ. ಜನವಾಡಕರ್, ಶಿಕ್ಷಣ ತಜ್ಞ ಸೋಮನಾಥ ಮುದ್ದಾ, ಗುರುನಾಥ ದೇಶಮುಖ ಸಂತಪುರ, ಬಸವರಾಜ ಶೆಟಕಾರ್ ಔರಾದ್, ಜ್ಞಾನ ಕಾರಂಜಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಾಣಿಕಪ್ಪ ಗೋರನಾಳೆ ಮಾತನಾಡಿದರು.
ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ರಾಜೇಂದ್ರ ಮಣಗೇರಿ, ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್‍ನ ರೂಪಾ ಪಾಟೀಲ ಶಿವಲೀಲಾ ಬಂಡೆ, ವಿನಯಕುಮಾರ ಇದ್ದರು.
