ಬೀದರ್: ಅಕ್ಕ ಅನ್ನಪೂರ್ಣತಾಯಿ ಬಸವ ತತ್ವ ಪ್ರಚಾರಕ್ಕೆ ತಮ್ಮ ಬದುಕು ಸಮರ್ಪಿಸಿಕೊಂಡಿದ್ದರು. ಅವರ ಬಸವ ನಿಷ್ಠೆ ಅನುಕರಣೀಯ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಇಲ್ಲಿಯ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೋತ್ಸವದ ಮೊದಲ ದಿನವಾದ ಶುಕ್ರವಾರ ನಡೆದ ಸಾಮೂಹಿಕ ವಚನ ಪಾರಾಯಣ ಹಾಗೂ ಅನುಭಾವ ಗೋಷ್ಠಿಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನನಗೆ ಅಕ್ಕನವರು ಗುರುವಾಗಿದ್ದರೆ, ಅವರಿಗೆ ಬಸವಣ್ಣ ಗುರುವಾಗಿದ್ದರು. ಕಾರಣ, ಅಕ್ಕನವರ ಬೋಧನೆಗಳೇ ನನಗೆ ಬಸವಣ್ಣನವರ ಬೋಧನೆಗಳಾಗಿವೆ. ಅಕ್ಕ ನನಗೆ ಗುರುವಷ್ಟೇ ಅಲ್ಲ; ತಾಯಿಯಾಗಿಯೂ ಪೋಷಿಸಿದ್ದಾರೆ ಎಂದು ನೆನೆದರು.
ಭಕ್ತಿ ಇದ್ದಲ್ಲಿ ಶಕ್ತಿ ಇರುತ್ತದೆ. ಕೇವಲ ತತ್ವ ಅರಿತರೆ ಸಾಲದು. ಅದನ್ನು ಕಾರ್ಯರೂಪಕ್ಕೆ ತರಬೇಕು. ಆಗ ಮಾತ್ರ ಬದುಕು ಅರಳುತ್ತದೆ. ವಿಸ್ತಾರಗೊಳ್ಳುತ್ತದೆ ಎಂದು ತಿಳಿಸಿದರು.
ಚರಜಂಗಮ ಸಿದ್ರಾಮಪ್ಪ ಕಪಲಾಪುರೆ ಮಾತನಾಡಿ, ಅರಣ್ಯದಂತಿದ್ದ ಈ ನೆಲ ಅಕ್ಕನವರು ಪಾದವಿಟ್ಟಿದ್ದರಿಂದ ಬಸವಗಿರಿ ಆಯಿತು. ಪವಿತ್ರ ಕ್ಷೇತ್ರವಾಯಿತು. ಅಕ್ಕನವರು ಮನೆ ಮನೆಗಳ ಮೇಲೆ ಬಸವ ಧ್ವಜ ಹಾರಿಸುವುದು, ವಚನ ಓದುವುದು, ಬಸವ ಚರಿತ್ರೆ ಓದುವುದನ್ನು ಕಲಿಸಿ ಅನಿಷ್ಠ ಪದ್ಧತಿಗಳನ್ನು ಹೊಡೆದೊಡಿಸಿದರು ಎಂದು ಹೇಳಿದರು.
ಇನ್ನೊಬ್ಬರ ನೋವು ನಲಿವುಗಳಿಗೆ ಸ್ಪಂದಿಸಿ ಧೈರ್ಯ ತುಂಬುತ್ತಿದ್ದ ಮಾತೃ ಸ್ವರೂಪಿ ಅಕ್ಕನನ್ನು ಕಳೆದುಕೊಂಡು ಸಮಾಜ ಬಡವಾಗಿದೆ ಎಂದು ತಿಳಿಸಿದರು.
ವಚನಗಳನ್ನು ಓದುವುದರಿಂದ ನಾಲಿಗೆ, ಕಿವಿ, ಹೃದಯವಷ್ಟೇ ಅಲ್ಲ; ಜೀವನವೂ ಶುದ್ಧವಾಗುತ್ತದೆ. 108 ವಚನಗಳನ್ನು ಓದಿದರೆ ಬದುಕಿನ ಹಲವು ಕಷ್ಟಗಳು ಪರಿಹಾರಗೊಳ್ಳುತ್ತವೆ ಎಂದರು.

ಅಕ್ಕನವರು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದರು. ವಚನ ವೈಭವ ಅಕ್ಕನವರಿಂದ ಜಾರಿಯಾಯಿತು ಎಂದು ಭಾಲ್ಕಿ ಹಿರೇಮಠದ ಮಹಾಲಿಂಗ ಸ್ವಾಮೀಜಿ ಸ್ಮರಿಸಿದರು.
ವಚನಗಳನ್ನು ಓದಿ, ಅನುಷ್ಠಾನಿಸುವುದು ವಚನ ಪಾರಾಯಣದ ಉದ್ದೇಶ. ವಚನ ಪಾರಾಯಣದಿಂದ ಮಾತು ಮೌನವಾಗಿ ಅಪರಿಮಿತ ಆನಂದ ಲಭಿಸುತ್ತದೆ ಎಂದು ಪರುಷಕಟ್ಟೆಯ ಚನ್ನಬಸವಣ್ಣ ಹೇಳಿದರು.
ಇನ್ನೊಬ್ಬರಲ್ಲಿ ದೋಷ ಹುಡುಕುವುದನ್ನು ಬಿಟ್ಟು, ತ್ಯಾಗ ಭಾವನೆ ಬೆಳೆಸಿಕೊಳ್ಳಬೇಕು. ಪರ ಚಿಂತೆ ನಮಗೇಕಯ್ಯ ಎಂಬ ಬಸವಾಣಿಯನ್ನು ಮರೆಯಬಾರದು. ಅಕ್ಕನವರು ಹೇಳಿದಂತೆ ಯಾವಾಗಲೂ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಲ್ಪನಾ ಬೀದೆ ಅಕ್ಕನವರ ಜೀವನ ಹಾಗೂ ಸಂದೇಶಗಳನ್ನು ಬಣ್ಣಿಸುವ ಸ್ವರಚಿತ ಕವನ ವಾಚಿಸಿದರು.
ಕಲಬುರಗಿಯ ಪತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ, ಉದ್ಯಮಿಗಳಾದ ಚಂದ್ರಶೇಖರ ಹೆಬ್ಬಾಳೆ, ಜೈರಾಜ ಖಂಡ್ರೆ, ಹುಮನಾಬಾದ್‍ನ ಮಲ್ಲಿಕಾರ್ಜುನ ರಟಕಲ್, ಸಾಹಿತಿ ರಮೇಶ ಮಠಪತಿ ಉಪಸ್ಥಿತರಿದ್ದರು.
ಚಂದ್ರಕಾಂತ ಪಟ್ನೆ, ಕಂಟೆಪ್ಪ ಗಂದಿಗುಡೆ, ರೇವಣಪ್ಪ ಮೂಲಗೆ ಹಾಗೂ ಮಹೇಶ ಬಿರಾದಾರ ತಂಡದವರ ವಚನ ಸಂಗೀತ ಗಮನ ಸೆಳೆಯಿತು. ಲಿಂಗಾಯತ
ಸೇವಾ ದಳದ ಅಧ್ಯಕ್ಷ ಅಭಿಷೇಕ ಮಠಪತಿ ಸ್ವಾಗತಿಸಿದರು. ಸಿ.ಎಸ್. ಪಾಟೀಲ, ಅಣವೀರ ಕೂಡಂಬಲ ಶರಣು ಸಮರ್ಪಿಸಿದರು.