ಬಸವಗಿರಿಯ ನಿಗರ್ಸದ ಮಡಿಲಲ್ಲಿ ಸಾಮೂಹಿಕ ವಚನ ಪಾರಾಯಣ
ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೋತ್ಸವ ಆರಂಭ
ಬೀದರ್: ಲಿಂಗಾಯತ ಮಹಾ ಮಠದ ವತಿಯಿಂದ ಇಲ್ಲಿಯ ಬಸವಗಿರಿಯ ನಿಸರ್ಗದ ಮಡಿಲಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಕ್ಕ ಅನ್ನಪೂರ್ಣತಾಯಿ ಅವರ ಪ್ರಥಮ ಸ್ಮರಣೋತ್ಸವ ಶುಕ್ರವಾರ ಆರಂಭಗೊಂಡಿತು.
ಮೊದಲಿಗೆ ಗುರುವಚನ ಪರುಷಕಟ್ಟೆಗೆ ತೆರಳಿ, ಪ್ರಭುದೇವ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಗುರು ವಚನಗಳಿಗೆ ಪುಷ್ಪವೃಷ್ಟಿಗೈದು, ಗೌರವ ಸಮರ್ಪಿಸಲಾಯಿತು.
ಬಳಿಕ ಧಾರವಾಡದ ಬಸವ ಭಕ್ತ ಬಸವರಾಜ ಹಡಪದ ಅವರು ಷಟ್‍ಸ್ಥಲ ಧ್ವಜಾರೋಣಗೈದರು. ಧ್ವಜಗೀತೆಯ ನಂತರ ಶರಣ ಸಂಕುಲದಿಂದ ಬಸವ ಜಯಘೋಷ ಮೊಳಗಿದವು. ಅನಂತರ ಅಕ್ಕನವರ ಐಕ್ಯ ಮಂಟಪದಲ್ಲಿ ವಚನಗಳನ್ನು ಓದಿ, ಬಸವಮಂತ್ರ ಪಠಣಗೈದು, ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ ಮಾಡಲಾಯಿತು.
ಮಳೆರಾಯನ ಕೃಪೆಯಿಂದ ತಂಪಾದ ವಾತಾವರಣದಲ್ಲಿ ಕೋಗಿಲೆ, ನವಿಲುಗಳ ಶಬ್ದಗಳ ಮಧ್ಯೆ ವಚನ ಪಾರಾಯಣ ಸುಸೂತ್ರವಾಗಿ ನಡೆಯಿತು. ನೆರೆದವರಲ್ಲಿ ಭಕ್ತಿ ಉಕ್ಕಿಸಿತು.