ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಯೋಜನೆ: ಭಿತ್ತಿ ಪತ್ರ ಬಿಡುಗಡೆ
ಬೀದರ್: ಹಮಿಲಾಪುರದ ವಿ.ಎಂ. ರಾಂಪುರೆ ಪಬ್ಲಿಕ್ ಸ್ಕೂಲ್ ಹಾಗೂ ವಿ.ಎಂ. ರಾಂಪುರೆ ಪ್ರೀ ಸ್ಕೂಲ್ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಮೇ 25 ರಂದು ಹಮ್ಮಿಕೊಳ್ಳಲಾದ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಯೋಜನೆಯ ಉದ್ಘಾಟನೆ, ಅನಾಥ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಸಮಾರಂಭದ ಕರಪತ್ರವನ್ನು ನಗರದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ಮಹಿಳಾ ಸಾಕ್ಷರತೆಗೆ ಉತ್ತೇಜನ ನೀಡುವುದಕ್ಕಾಗಿ ಶಾಲೆಯಿಂದ ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಕೊಡಲು ನಿರ್ಧರಿಸಲಾಗಿದೆ ಎಂದು ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಹೇಶ ಎಸ್. ರಾಂಪುರೆ ತಿಳಿಸಿದರು.

ಉಚಿತ ಶಿಕ್ಷಣ ಯೋಜನೆ ನಿರಂತರ ಇರಲಿದೆ. ಈಗಾಗಲೇ ಈ ವರ್ಷದ ಉಚಿತ ಶಿಕ್ಷಣಕ್ಕೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಆಸಕ್ತರು ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ರಂಗ ಮಂದಿರದಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಹೆಣ್ಣುಮಕ್ಕಳ ಉಚಿತ ಶಿಕ್ಷಣ ಯೋಜನೆ ಉದ್ಘಾಟನೆ, ಅನಾಥ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಸಮಾರಂಭ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ನಗರಸಭೆ ಸದಸ್ಯ ಹಣಮಂತ ಮಲ್ಕಾಪುರ, ಸುಬ್ಬಣ್ಣ ಕರನಳ್ಳಿ, ಪ್ರದೀಪ್ ನಾಟೇಕರ್, ಸಂದೀಪ್ ಕಾಂಟೆ, ಚರಣಜೀತ್ ಆಣದೂರೆ, ಸಂತೋಷ್ ಶೇರಿಕಾರ್, ಅವಿನಾಶ, ಶ್ರೀಕಾಂತ ಭವಾನಿ, ಶಿವಕುಮಾರ ನೀಲಿಕಟ್ಟಿ ಮತ್ತಿತರರು ಇದ್ದರು.