—
ಬೀದರ್ : ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಔರಾದ(ಬಿ) ಪಟ್ಟಣದಲ್ಲಿ ಮೇ.26ರ ಬೆಳಗ್ಗೆ 9 ಗಂಟೆಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.
ಶಾಸಕರ ಕಛೇರಿಯ ಸಭಾಂಗಣದಲ್ಲಿ ಮೇ.22ರಂದು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಔರಾದ ಪಟ್ಟಣದ ಪ್ರವಾಸಿ ಮಂದಿರದ ಹತ್ತಿರದಿಂದ ಯಾತ್ರೆ ಹೊರಟು ಪ್ರಮುಖ ರಸ್ತೆಗಳ ಮುಖಾಂತರ ಎಪಿಎಂಸಿ ವೃತ್ತದ ವರೆಗೆ ಬಂದು ಕೊನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲಿ ಶತೃರಾಷ್ಟçದ ಪ್ರೇರಣೆಯಿಂದ ಉಗ್ರರು ನಾಗರಿಕರ ಮೇಲೆ ನಡೆಸಿದ ಅಟ್ಟಹಾಸಕ್ಕೆ ದೇಶದ ಹೆಮ್ಮೆಯ ಸೈನಿಕರು ಸೇಡು ತೀರಿಸಿಕೊಂಡಿದ್ದಾರೆ. ಪ್ರತಿ ಸಾರಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುವ ಪಾಕಿಸ್ತಾನಕ್ಕೆ ಉತ್ತಮ ಪಾಠ ಕಲಿಸಿಕೊಟ್ಟಿದ್ದಾರೆ. ನಮ್ಮ ಹೆಮ್ಮೆಯ ಸೈನಿಕರಿಗೆ ಗೌರವ ಸೂಚಿಸುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಔರಾದ್‌ನಲ್ಲಿಯೂ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ. ಮಾಜಿ ಸೈನಿಕರು, ಮಠಾಧೀಶರು, ಹಿರಿಯ ನಾಗರಿಕರು, ಚಿಂತಕರು, ಸರ್ಕಾರಿ, ಖಾಸಗಿ ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ಮೂಲಕ ದೇಶಕ್ಕಾಗಿ ಹೋರಾಡುತ್ತಿರುವ ಭದ್ರತಾ ಪಡೆಗಳಿಗೆ ಗೌರವ ಸಲ್ಲಿಸೋಣ ಎಂದರು.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಭಾರತೀಯ ಸೇನೆಗೆ ಹೆಚ್ಚಿನ ಶಕ್ತಿ ನೀಡಿದ್ದಾರೆ. ಉಗ್ರರು, ದೇಶವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಂಪೂರ್ಣ ಅಧಿಕಾರ ನೀಡಿದ್ದಾರೆ. ಇದರಿಂದ ನಮ್ಮ ಸೇನೆ ಹೆಚ್ಚು ಬಲಿಷ್ಠವಾಗಿದೆ. ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಉಗ್ರರಿಗೆ ರಕ್ಷಣೆ ಕೊಡುತ್ತಿರುವ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿದ್ದಾರೆ. ಈ ಮೂಲಕ ಭಾರತೀಯ ಸೇನೆಯ ಶಕ್ತಿಯನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಅರಹಂತ ಸಾವಳೆ, ರಾಮ ನರೋಟೆ, ಡಾ.ವೈಜಿನಾಥ ಬುಟ್ಟೆ, ಮಲ್ಲಿಕಾರ್ಜುನ ದಾನಾ, ಬಸವರಾಜ ಪಾಟೀಲ ಕಮಲನಗರ, ಮಹೇಶ್ವರ ಸ್ವಾಮಿ, ದೇವಾನಂದ ಪಾಟೀಲ, ರಾಜಕುಮಾರ ಸೋರಳ್ಳಿ, ಪ್ರಕಾಶ ಜೀರ್ಗೆ, ಬಂಟಿ ರಾಂಪೂರೆ ಸೇರಿದಂತೆ ಇತರರಿದ್ದರು.