ಹಿರಿಯ ನಾಗರಿಕರಿಗೆ ಸಲಕರಣೆ ವಿತರಣೆ
ಬೀದರ್: ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಈಚೆಗೆ ವಿವಿಧ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಯಿತು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು, ವ್ಹೀಲ್ ಚೇರ್, ಸ್ನಾನ ಕುರ್ಚಿ, ಆಧಾರ ಬಡಿಗೆ, ಸೊಂಟದ ಪಟ್ಟಿ, ಕೊರಳ ಪಟ್ಟಿ, ಮೊಳಕಾಲು ಪಟ್ಟಿ, ಮೊಳಕೈ ಪಟ್ಟಿ ಹಾಗೂ ಇತರ ಸಲಕರಣೆಗಳ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಹಿರಿಯ ನಾಗರಿಕರು ಹಾಗೂ ಅಂಗವಿಕಲರನ್ನು ಗುರುತಿಸಿ ಪ್ರಧಾನಮಂತ್ರಿ ದಿವ್ಯಾಶಾ ಕೇಂದ್ರದಿಂದ ವಿವಿಧ ಸಲಕರಣೆಗಳನ್ನು ಕೊಡಿಸಿದ ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಹಿರಿಯ ನಾಗರಿಕರು, ಅಂಗವಿಕರು ಹಾಗೂ ಇತರರಿಗೆ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಇವೆ. ಅರ್ಹರು ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಪಿಕೆಪಿಎಸ್ ಮಾಜಿ ಅಧ್ಯಕ್ಷ ರಮೇಶ ಶೆಟ್ಟಿಗುಂಡಿ ಹಾಗೂ ಇತರರ ಸಹಕಾರದೊಂದಿಗೆ ಒಂದು ತಿಂಗಳ ಹಿಂದೆ ಪ್ರಧಾನಮಂತ್ರಿ ದಿವ್ಯಾಶಾ ಕೇಂದ್ರದಿಂದ ಸಲಕರಣೆಗಳ ವಿತರಣೆಗಾಗಿ ಮಂದಕನಳ್ಳಿ, ಕಂಗನಕೋಟ್, ಶಮಶೇರನಗರ, ಶಮಶೇರನಗರ ತಾಂಡಾ ಹಾಗೂ ಮಂದಕನಳ್ಳಿ ತಾಂಡಾದ 465 ಜನರ ತಪಾಸಣೆ ಮಾಡಲಾಗಿತ್ತು. ಮೊದಲ ಹಂತದಲ್ಲಿ 203 ಜನರಿಗೆ ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ ಹೇಳಿದರು.
ಎರಡನೇ ಹಂತದಲ್ಲಿ ಉಳಿದ ಫಲಾನುಭವಿಗಳಿಗೂ ಸಕಲರಣೆ ವಿತರಿಸಲಾಗುವುದು ಎಂದು ತಿಳಿಸಿದರು.
ಬೀದರ್ ಮೈನಾರಿಟಿ ಸ್ಪೋರ್ಟ್ ಅಸೋಸಿಯೇಷನ್ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಬೀದರ್‍ನ ಮೇಗೂರ ನೇತ್ರ ಆಸ್ಪತ್ರೆ ಸಹಯೋಗದಲ್ಲಿ 100 ಜನರ ಉಚಿತ ನೇತ್ರ ತಪಾಸಣೆ ಮಾಡಲಾಗಿದೆ ಎಂದು ಹೇಳಿದರು.
ಎಂ.ಡಿ. ಸಿರಾಜೊದ್ದೀನ್ ಚಿಂಚೋಳಿಕರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ನಾಗಭೂಷಣ ಕಮಠಾಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲೀಮುದ್ದೀನ್ ಚಿಂಚೋಳಿಕರ್, ಪಿಡಿಒ ಕುಮುದಾ, ಪಿಕೆಪಿಎಸ್ ಅಧ್ಯಕ್ಷ ನಯುಮ್ ಪಟೇಲ್, ಮಾಜಿ ಅಧ್ಯಕ್ಷ ಕಾಶೀನಾಥ ಗೌರಶೆಟ್ಟಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ರಮೇಶ ಶೆಟ್ಟಿಗುಂಡಿ, ಎಂ.ಡಿ. ರಿಯಾಜುದ್ದಿನ್ ಚಿಂಚೋಳಿಕರ್, ಗಂಗಾಧರ ಗೌರಶೆಟ್ಟಿ, ರಾಜು ಮುಕ್ತೆದಾರ್, ಸಚಿನ್ ಬಾವಿದೊಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ದಿವ್ಯಾಶಾ ಕೇಂದ್ರ ಹಾಗೂ ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.