ಅಕ್ರಮ ಮಧ್ಯ ಮಾರಾಟ ತಡೆಗೆ ಹೆಚ್ಚಿನ ಕ್ರಮ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ
ಬೀದರ್ – ಜಿಲ್ಲೆಯಲ್ಲಿ ಅಕ್ರಮ ಅಬಕಾರಿ ಚಟುವಟಿಕೆಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಇನ್ನಷ್ಟು ಕಾರ್ಯಕ್ಷಮತೆ ವಹಿಸಿ ಹೆಚ್ಚಿನ ಗುಣಮಟ್ಟದ ಪ್ರಕರಣಗಳನ್ನು ದಾಖಲಿಸುಂತೆ ಅಬಕಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ನಿರ್ದೇಶನ ನೀಡಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಳ್ಳಭಟ್ಟಿ ಸಾರಾಯಿ, ಸೇಂದಿ , ಅಕ್ರಮ ಮದ್ಯ ಮತ್ತು ಮಾದಕ ವಸ್ತುಗಳ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ರೂಢಿಗತ ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ನ್ಯಾಯ ಸಂಹಿತೆ ಕಲಂ129 ರಂತೆ ಕ್ರಮ ವಹಿಸಲು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡಲು ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳಿಗೆ ಸೂಚಿಸಿದರು. ಹಾಗೆಯೇ ಪೋಲಿಸ್ ಅಧಿಕಾರಿಗಳು ಕಳ್ಳಭಟ್ಟಿ ಮತ್ತು ಸೇಂದಿ ದಾಸ್ತಾನು ಬಗ್ಗೆ ಮೊಕದ್ದಮೆಗಳನ್ನು ದಾಖಲಿಸುವಾಗ ಅಬಕಾರಿ ಕಾಯ್ದೆಯೊಂದಿಗೆ ಭಾರತೀಯ ನಾಗರಿಕ ನ್ಯಾಯ ಸಂಹಿತೆ ಕಲಂ 123 ರಡಿಯೂ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ತಹಶೀಲ್ದಾರ್‌ಗಳು ಕಳ್ಳಭಟ್ಟಿ, ಸೇಂದಿ ಮತ್ತು ಅಕ್ರಮ ಮದ್ಯ,ಮತ್ತು ಮಾದಕ ವಸ್ತುಗಳ ನಿರ್ಮೂಲನೆ ಬಗ್ಗೆ ತಾಲೂಕ ಮಟ್ಟದ ಸ್ಥಾಯಿ ಸಮಿತಿಯ ಸದಸ್ಯರುಗಳ ಸಭೆಯನ್ನು ಪ್ರತಿ ತಿಂಗಳು ನಡೆಸಿ ವಿವಿಧ ಇಲಾಖೆಗಳ ಸಾಧನೆಗಳ ಬಗ್ಗೆ ಪರಾಮರ್ಶಿಸಿ ಮಾಸಿಕ ವರದಿಯನ್ನು ಸಲ್ಲಿಸಲು ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳಿಗೆ ಸೂಚಿಸಿದರು ಹಾಗೂ ಅಬಕಾರಿ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ವಾಹನಗಳನ್ನು ಇತರರಿಗೆ ಪರಭಾರೆ ಮಾಡದಂತೆ ಆರ್.ಟಿ.ಓ. ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿ ಕಳ್ಳಭಟ್ಟಿ, ಸೇಂದಿ, ನಕಲಿ ಮದ್ಯ ಮತ್ತು ಮಾದಕ ವಸ್ತುಗಳ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ಆಶ್ವಾಸನೆ ನೀಡಿದರು.
ಈ ಸಭೆಯಲ್ಲಿ ಅಬಕಾರಿ, ಪೋಲಿಸ್, ಕಂದಾಯ, ಶಿಕ್ಷಣ, ಆಹಾರ ಸುರಕ್ಷಾ ಮತ್ತು ಔಷಧ ಆಡಳಿತ, ಅರಣ್ಯ, ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
**