ಬೀದರ್: ರಾಜ್ಯದಲ್ಲಿನ ಮರಾಠಾ ಸಮಾಜವನ್ನು ಪ್ರವರ್ಗ 3ಬಿ ಯಿಂದ 2ಎ ಗೆ ಸೇರ್ಪಡೆ ಮಾಡಬೇಕೆಂದು ಮರಾಠಾ ಕ್ರಾಂತಿ ಮೋರ್ಚಾದ ರಾಜ್ಯ ಸಂಘಟಕರಾದ ನಾರಾಯಣಗಣೇಶ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಛತ್ರಪತಿ ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಮೂಲಕ ನಡೆದುಕೊಂಡು ಬಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ ತಿಳಿಸಿದರು. ಮರಾಠಾ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ. ನಮಗಿಂತ ಬಲಿಷ್ಠ ಸಮುದಾಯದವರು 2ಎ ಪ್ರವರ್ಗದಲ್ಲಿದ್ದಾರೆ. ಇದರಿಂದ ಮರಾಠರಿಗೆ ಅನ್ಯಾಯವಾಗುತ್ತಿದೆ. ಈ ಹಿಂದೆ ಜಾತಿಜನಗಣತಿ ಬಳಿಕ ತಮ್ಮ ಬೇಡಿಕೆಗೆ ಗಮನ ಹರಿಸಲಾಗುವುದು ಎಂದು ಆಶ್ವಾಸನೆ ಸರ್ಕಾರ ನೀಡಿತ್ತು. ಈಗಲೂ ಸಹ ಹಿಂದುಳಿದ ಆಯೋಗದ ಜಾತಿಗಣತಿ ವರದಿಯಂತೆ ರಾಜ್ಯದಲ್ಲಿ ಮರಾಠಾ ಸಮುದಾಯ ಕಡಿಮೆ ಸಂಖ್ಯೆಯಲ್ಲಿದ್ದು, ಬಹುತೇಕ ಮರಾಠರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ರಾಜ್ಯದಲ್ಲಿ 16 ಲಕ್ಷ ಮರಾಠರ ಸಂಖ್ಯೆ ವರದಿ ಪ್ರಕಾರವಿದೆ. ಆದ್ದರಿಂದ ಈ ಸಮುದಾಯವನ್ನು 2ಎ ಗೆ ಸೇರ್ಪಡೆ ಮಾಡಬೇಕೆಂದು ತಿಳಿಸಿದರು.
2012ರಲ್ಲಿ ಪ್ರಸ್ತುತ ಸರ್ಕಾರ ಮರಾಠರ ಸ್ಥತಿಗತಿ ದಯನೀಯವಾಗಿದೆ. ಅವರಿಗೆ 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸ್ಸು ಮಾಡಿತ್ತು. ಅದರ ನಂತರ ಮರಾಠಾ ಸಮುದಾಯ ಹಲವು ಬಾರಿ ಪ್ರತಿಭಟನೆ, ಹೋರಾಟ, ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇಂದಿಗೂ ಜಾರಿಗೆ ಬಂದಿಲ್ಲ. ಕಾಂತರಾಜು ವರದಿ ಬಂದರೂ ಕೂಡಾ ಸರ್ಕಾರ ಹಿಂದೇಟು ಹಾಕುತ್ತಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡಲೇ ಮರಾಠಾ ಸಮಾಜವನ್ನು 2ಎ ಗೆ ಸೇರ್ಪಡೆ ಮಾಡಿ ಮರಾಠರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿದರು.
ಇದೇ ವೇಳೆ ಮರಾಠ ಕ್ರಾಂತಿ ಮೋರ್ಚಾದ ಪ್ರಮುಖರಾದ ಶಿವಾಜಿರಾವ ಪಾಟೀಲ ಮುಂಗನಾಳ, ಬಾಲಾಜಿ ಬಿರಾದಾರ ಗಣೇಶಪುರ, ವೆಂಕಟ ಚಿದ್ರೆ, ಪ್ರದೀಪ ಬಿರಾದಾರ, ರಂಜೀತ್ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.