ಬೀದರ್: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ವಿಶೇಷವಾಗಿ ಹಿಂದು ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ಖಂಡನೀಯ ಹಾಗೂ ನಿಂದನಿಯವಾಗಿದ್ದು, ಇದು ವ್ಯವಸ್ಥಿತವಾದ ದಾಳಿಯಂತಿದೆ ಎಂದು ಬಿಜೆಪಿ ಸ್ಥಳಿಯ ಹಿರಿಯ ಮುಖಂಡ ಈಶ್ವರಸಿಂಗ್ ಠಾಕೂರ್ ತಿಳಿಸಿದರು.
ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಹತ್ಯೆ ಮಾಡುವ ಮುನ್ನ ಅವರ ಐಡಿ ಹಾಗೂ ಧರ್ಮವನ್ನು ತಿಳಿದು ಹತ್ಯೆ ಮಾಡಿದ್ದು ಪೈಶಾಚಿಕ ಕೃತ್ಯ. ದೇಶದ ಏಕತೆ ಹಾಗೂ ಅಖಂಡತೆಗೆ ಧಕ್ಕೆಯುಂಟು ಮಾಡಲು ಇಂಥ ದುಷ್ಕೃತ್ಯ ಎಸಗಲಾಗಿದೆ. ಜಗತ್ತಿನಲ್ಲಿ ಭಾರತದ ಕೀರ್ತಿ ಹೆಚ್ಚಾಗುತ್ತಿದ್ದು, ಎಲ್ಲ ದೇಶಗಳು ಭಾರತದ ಏಳಿಗೆಯನ್ನು ಮುಕ್ತಕಂಠದಿಂದ ಹೊಗಳುತ್ತಿದ್ದುದು ಈ ರಾಕ್ಷಸರಿಗೆ ಸಹಿಸಲಿಕ್ಕಾಗುತ್ತಿಲ್ಲ. ಈ ನರಭಕ್ಷಕರು ಇಂಥ ಹೇಡಿ ಕೇಲಸ ಮಾಡಿದರೂ ನಮ್ಮ ಕೇಂದ್ರ ಸರ್ಕಾರ ಈ ಹೇಡಿಗಳಿಗೆ ಜಗ್ಗುವುದಿಲ್ಲ, ಬಗ್ಗುವುದಿಲ್ಲ, ಕುಗ್ಗುವುದೂ ಇಲ್ಲ. ಆ ನರರಾಕ್ಷಸರ ಹೆಡೆ ಮುರಿ ಕಟ್ಟಲು ನಮ್ಮ ಸೇನೆ ಸನ್ನದ್ದವಾಗಿದೆ. ನಮ್ಮ ಯೋಧರ ಮೇಲೆ ನಮಗೆ ನಂಬಿಕೆ ಹಾಗೂ ಆತ್ಮವಿಶ್ವಸವಿದೆ ಎಂದರು.

ಮುಂದುವರೆದು ಮಾತನಾಡಿರುವ ಠಾಕೂರ್ ಅವರು, ವಕ್ಫ್ ಕಾಯಿದೆ ತಿದ್ದುಪಡಿ ವಿರೂದ್ಧ ಅಖಿಲ ಭಾರತೀಯ ಮುಸ್ಲಿಮ್ ವಯಕ್ತಿಕ ಕಾನೂನು ಮಂಡಳಿ ಬೀದರ್ ನಲ್ಲಿ ಹೋರಾಟ ಮಾಡಲು ಮುಂದಾಗಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ನಮ್ಮ ಸಂವಿಧಾನದ ಪ್ರಕಾರ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರ ಇದೆ. ಆದರೆ ಹೋರಾಟ ಕಾನೂನಿನ ಚೌಕಟ್ಟಿಲ್ಲಿ ಆಗಬೇಕು. ಈಗಾಗಲೇ ದೇಶದ ವಿವಿಧ ಕಡೆಗಳಲ್ಲಿ ಪರ್ಸನಲ್ ಲಾ ಬೋರ್ಡ ವತಿಯಿಂದ ನಡೆದ ಹೋರಾಟಗಳಲ್ಲಿ ಗಲಾಟೆಗಳು ಆಗಿವೆ. ಎಲ್ಲಲ್ಲಿ ಪ್ರತಿಭಟನೆಗಳು ಆಗಿವೆ ಅಲ್ಲಿ ದೊಂಬಿ, ಗಲಾಟೆಯೊಂದಿಗೆ ಹತ್ಯೆಗಳು ಕೂಡ ನಡೆದಿವೆ. ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ದಾಳಿ ನಡೆದಿವೆ ಇದಕ್ಕೆ ಮುರ್ಶಿದಾಬಾದ ಘಟನೆಯೆ ಸಾಕ್ಷಿಯಾಗಿದೆ ಎಂದರು
ಈಗಾಗಲೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಹೋರಾಟಕ್ಕೆ ನಮ್ಮ ಅಭ್ಯಂತರವಿಲ್ಲ ಆದರೂ ಕೂಡ ಬೀದರ್ ಅತಿ ಸೂಕ್ಷ್ಮವಾದ ಸ್ಥಳವಾಗಿದೆ. ಈ ಹಿಂದೆ ಇಲ್ಲಿ ಅನೇಕ ಘಟನೆಗಳಾಗಿವೆ. ಬೀದರ್ ಶಾಂತಿಯುತ ನಗರವಾಗಿದೆ. ಇಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದೇನೆ. ಒಂದು ವೇಳೆ ಸರ್ಕಾರಕ್ಕೆ ಮಣಿದು ಅನುಮತಿ ನೀಡಿದರೆ ಸೂಕ್ಷ್ಮ ಪ್ರದೇಶದಲ್ಲಿ ಜನರ ಸುರಕ್ಷತೆಗೆ ವ್ಯವಸ್ಥೆ ಮಾಡಬೇಕು. ಹೋರಾಟಕ್ಕೆ ಕರೆ ನೀಡಿದವರಿಂದ ಬಾಂಡ್ ಮಾಡಿಸಿ ಅವರನ್ನು ಹೊಣೆಗಾರರಾಗಿ ಮಾಡಬೇಕು. ಬೀದರ್ನಲ್ಲಿ ಯಾವುದೇ ರೀತಿಯ ಅಶಾಂತಿ ಆಗಬಾರದು. ಜಿಲ್ಲಾಡಳಿತ ಗಮನಿಸಬೇಕು. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಇದಕ್ಕೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಡಾ.ವಿಶ್ವನಾಥ ಉಪ್ಪೆ, ವೆಂಕಟ ಚಿದ್ರಿ ಪತ್ರಿಕಾಗೋಷ್ಟಿಯಲ್ಲಿದ್ದರು.