ಬೀದರ್: ತಾಲ್ಲೂಕಿನ ಗುನ್ನಳ್ಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ 12ನೇ ಜಾತ್ರಾ ಮಹೋತ್ಸವ ಏಪ್ರಿಲ್ 18 ರಿಂದ 20 ರ ವರೆಗೆ ನಡೆಯಲಿದೆ.
ಏಪ್ರಿಲ್ 18 ರಂದು ಸಂಜೆ 6ಕ್ಕೆ ಗ್ರಾಮದಲ್ಲಿ ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಶೋಭಾಯಾತ್ರೆ, ದೇವಸ್ಥಾನದಲ್ಲಿ ಸಂಜೆ 7ಕ್ಕೆ ನಂದಿ ಮೂರ್ತಿ ಸ್ಥಾಪನೆ, ನೂತನ ರಥಕ್ಕೆ ಪೂಜೆ ಹಾಗೂ ರಾತ್ರಿ 8ಕ್ಕೆ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ ಎಂದು ಬೀದರ್‍ನ ಗಾಂಧಿ ಗಂಜ್ ಸಹಕಾರ ಬ್ಯಾಂಕ್‍ನ ಉಪಾಧ್ಯಕ್ಷರೂ ಆದ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಸುನೀಲಕುಮಾರ ಬಿರಾದಾರ ತಿಳಿಸಿದ್ದಾರೆ.
ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಧರ್ಮಸಭೆಯ ಸಾನಿಧ್ಯ ವಹಿಸುವರು. ತಡೋಳಾದ ರಾಜೇಶ್ವರ ಶಿವಾಚಾರ್ಯರು ನೇತೃತ್ವ ವಹಿಸುವರು. ಲಾಡಗೇರಿಯ ಗಂಗಾಧರ ಶಿವಾಚಾರ್ಯರು, ಖಟಕಚಿಂಚೋಳಿಯ ಗುರುಪಾದಯ್ಯ ಸ್ವಾಮೀಜಿ ಸಮ್ಮುಖ ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆ ವಹಿಸುವರು. ಸಂಸದ ಸಾಗರ್ ಖಂಡ್ರೆ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಮಾಜಿ ಶಾಸಕ ಅಶೋಕ್ ಖೇಣಿ, ಮುಖಂಡ ಚಂದ್ರಾಸಿಂಗ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಘಾಳೆಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದ್ದಾರೆ.
19 ರಂದು ಸಂಜೆ 5ಕ್ಕೆ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಂಜೆ 6ಕ್ಕೆ ಅಕ್ಕ ಮಹಾದೇವಿ ಮಹಿಳಾ ಮಂಡಳ ವತಿಯಿಂದ ಕೋಲಾಟ ನಡೆಯಲಿದೆ. 20 ರಂದು ನಸುಕಿನ ಜಾವ 5ಕ್ಕೆ ರುದ್ರಾಭಿಷೇಕ, ಬೆಳಿಗ್ಗೆ 6ಕ್ಕೆ ಪಲ್ಲಕ್ಕಿ ಮೆರವಣಿಗೆ, ಬೆಳಿಗ್ಗೆ 7ಕ್ಕೆ ಅಗ್ನಿ ಕುಂಡದ ಪೂಜೆ, ಮಧ್ಯಾಹ್ನ 12ಕ್ಕೆ ಮಹಾ ಪ್ರಸಾದ ವಿತರಣೆ, ಸಂಜೆ 6ಕ್ಕೆ ರಥೋತ್ಸವ, ರಾತ್ರಿ 8ಕ್ಕೆ ಕೋಲಾಟ ಮತ್ತು ರಾತ್ರಿ 9ಕ್ಕೆ ಭಜನೆ ಜರುಗಲಿದೆ ಎಂದು ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದಲ್ಲಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.