ಬೀದರ್ : ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಏ.11ರಂದು ಔರಾದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಇದೇ ವೇಳೆ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ನಡೆಸಿ ಕಾಲೇಜಿನ ಅಭಿವೃದ್ಧಿ ಮತ್ತು ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ಮಾಡಬೇಕಾದ ಕೆಲಸ-ಕಾರ್ಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.
ಹಿಂದೆ ಕೆಲಸ ಮಾಡಿದ್ದ ಪ್ರಾಂಶುಪಾಲರ ನಿಷ್ಕಾಳಜಿಯಿಂದಾಗಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಳಿ ಶಾಸಕರು ತೀವ್ರ ಆಕ್ರೋಶ ಹೊರ ಹಾಕಿದರು. ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಡೆದು ವಿಶ್ವವಿದ್ಯಾಲಯಕ್ಕೆ ಭರಿಸದ ಕಾರಣ ಸಕಾಲಕ್ಕೆ ಅಂಕಪಟ್ಟಿಗಳು ಸಿಗದೇ ವಿದ್ಯಾರ್ಥಿಗಳು ಮುಂದಿನ ವ್ಯಾಸಂಗ ಮಾಡಲು ಆಗದೆ ಉದ್ಯೋಗ ಪಡೆಯಲು ಸಾಧ್ಯವಾಗದೇ ಅತಂತ್ರರಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸಂಬಂಧಿತ ಸಚಿವರು, ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.

ಅವಶ್ಯಕತೆಗಿಂತ ಹೆಚ್ಚಿನ ಸ್ಟೇಷನರಿ ಹಾಗೂ ಮತ್ತಿತರೆ ಸಾಮಗ್ರಿ ಖರೀದಿಸಿರುವುದು, ಪ್ರಾಜೆಕ್ಟರ್, ಲ್ಯಾಪ್‌ಟಾಪ್‌ಗಳ ದುರ್ಬಳಕೆ, ಗ್ರಂಥಾಲಯದಿಂದ ಸಾವಿರಾರು ಪುಸ್ತಕಗಳ ನಾಪತ್ತೆ, ಖರ್ಚು ವೆಚ್ಚಗಳ ವಹಿ ನಿರ್ವಹಿಸದೇ ಇರುವುದು, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಯಲ್ಲಿ ತಾರತಮ್ಯ, ಕಾಲೇಜು ಅಭಿವೃದ್ಧಿ ಸಮಿತಿಯ ಹಣವನ್ನು ಅಧ್ಯಕ್ಷರ ಅನುಮತಿ ಪಡೆಯದೇ ಖರ್ಚು ಮಾಡಿರುವುದು, ವಿದ್ಯಾರ್ಥಿವೇತನ ಹಣ ದುರ್ಬಳಕೆಯಂತಹ ಸುಮಾರು 21 ಗುರುತರ ಆರೋಪಗಳು ಹಿಂದಿನ ಪ್ರಾಂಶುಪಾಲರ ಮೇಲಿವೆ. ಕಾಲೇಜು ಅಭಿವೃದ್ಧಿಯನ್ನು ಮರೆತು ಲಕ್ಷಾಂತರ ಹಣ ಲೂಟಿ ಮಾಡಿದ್ದಾರೆಂದು ಜನ ಆರೋಪಿಸುತ್ತಿದ್ದಾರೆ. ಕಾಲೇಜು ಅಭಿವೃದ್ಧಿಯ ಬದಲು ಅಧೋಗತಿಗೆ ತಲುಪಿದೆ ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಹೊಸದಾಗಿ ಬಂದಿರುವ ಪ್ರಾಂಶುಪಾಲರು ಸರಿಯಾಗಿ ಕೆಲಸ ಮಾಡಬೇಕು. ಕಾಲೇಜು ಅಭಿವೃದ್ಧಿಗೆ ಒಂದು ಯೋಜನೆಯನ್ನು ಹಾಕಿಕೊಂಡು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ. ಆದರೆ ಅವ್ಯವಹಾರಗಳು ನಡೆದರೆ ಯಾರೇ ಇರಲಿ ಸುಮ್ಮನಿರುವುದಿಲ್ಲ. ಹಾಗಾಗಿ ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕೆಂದು ಹೇಳಿದರು.
ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ: ಕಾಲೇಜು ಆವರಣದಲ್ಲಿ ಹೊಸ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಒಂದೇ ಕೊಳವೆ ಬಾವಿಯಿದ್ದು, ಕಟ್ಟಡಗಳ ನಿರ್ಮಾಣ ಮತ್ತು ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ ಎಂದು ಪ್ರಾಂಶುಪಾಲರು ಶಾಸಕರ ಗಮನಕ್ಕೆ ತಂದಾಗ ಕೂಡಲೇ ಹೊಸ ಬೋರವೆಲ್ ಕಲ್ಪಿಸಿಕೊಡುವಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಹಾವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಸುಮಾರು 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ದೂರ ಇದ್ದು, ಮಕ್ಕಳು ನಡೆದುಕೊಂಡೇ ಕಾಲೇಜಿಗೆ ಬರುತ್ತಿದ್ದಾರೆ ಎಂದು ಪ್ರಾಂಶುಪಾಲರು ಸಭೆಯಲ್ಲಿ ಶಾಸಕರ ಗಮನಕ್ಕೆ ತಂದರು. ಸ್ಥಳಕ್ಕೆ ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ರನ್ನು ಕರೆಸಿ ಎರಡು ದಿನದೊಳಗಾಗಿ ಸಿಟಿ ಬಸ್ ಓಡಿಸಲು ವ್ಯವಸ್ಥೆ ಮಾಡಿಕೊಡುವಂತೆ ತಾಕೀತು ಮಾಡಿದರು. ಪ್ರಾಂಶುಪಾಲರಾದ ಅಂಬಿಕಾ ಕೊತಮೀರ್ ಸೇರಿದಂತೆ ಎಲ್ಲ ಉಪನ್ಯಾಸಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
*ಹೊಸ ಕಟ್ಟಡಕ್ಕೆ ಭೂಮಿ ಪೂಜೆ:* ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ 3.88 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಹೆಚ್ಚುವರಿ ಬ್ಲಾಕ್ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಕಟ್ಟಡ ಗುಣಮಟ್ಟದಿಂದ ನಿರ್ಮಿಸಬೇಕು. ಸರಿಯಾಗಿ ಕ್ಯೂರಿಂಗ್ ಮಾಡಿಸಬೇಕು. ಕಟ್ಟಡ ಭವ್ಯವಾಗಿ ಮತ್ತು ಸುಂದರವಾಗಿ ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ತಿಳಿಸಿದರು.
ಅಂಕಪಟ್ಟಿ ವಿತರಣೆ – ಬಹಳಷ್ಟು ದಿನಗಳಿಂದ ಅಂಕಪಟ್ಟಿ ಸಿಗದೇ ಪರದಾಡಿದ್ದ ವಿದ್ಯಾರ್ಥಿಗಳು ಸಂತೋಷಪಟ್ಟರು. ಸಾಕಷ್ಟು ಪ್ರಯತ್ನವಹಿಸಿ ಅಂಕಪಟ್ಟಿಗಳನ್ನು ತರಿಸುವಲ್ಲಿ ಯಶಸ್ವಿಯಾದ ಶಾಸಕರು ಇಂದು ಕಾಲೇಜಿಗೆ ತೆರಳಿ ಖುದ್ದಾಗಿ ಅಂಕಪಟ್ಟಿಗಳನ್ನು ವಿತರಿಸಿದರು.

ಈ ವೇಳೆ ಮಾತನಾಡಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದು, ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕೆಂಬ ಉದ್ದೇಶದಿಂದ ನಿರಂತರ ಶ್ರಮಿಸುತ್ತಿದ್ದೇನೆ. ಶಾಲಾ ಕಾಲೇಜುಗಳು, ವಸತಿ ಶಾಲೆಗಳನ್ನು ನಿರ್ಮಿಸುತ್ತಿದ್ದೇನೆ. ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗಾಗಲೇ ಒಂದು ಕಟ್ಟಡದ ಕೆಲಸ ನಡೆಯುತ್ತಿದೆ. ಆದರೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತೊಂದು ಹೊಸ ಕಟ್ಟಡ ಕೆಲಸಕ್ಕೆ ಚಾಲನೆ ಕೊಡಲಾಗಿದೆ. ಸಿಸಿ ರಸ್ತೆ, ಕಂಪೌಂಡ್ ಗೋಡೆ, ಗೇಟ್ ಸೇರಿದಂತೆ ಸರ್ಕಾರಿ ಕಾಲೇಜಿಗೆ ಏನೇನು ಬೇಕೊ ಪಟ್ಟಿ ಕೊಡಿ ಎಲ್ಲವನ್ನು ಹಂತ ಹಂತವಾಗಿ ಒದಗಿಸುತ್ತೇನೆಂದು ಭರವಸೆ ನೀಡಿದರು.
ನಂತರ ಕಾಲೇಜು ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಕೆಲಸ ಸರಿಯಾಗಿ ಆಗಬೇಕು. ಪ್ರಾಂಶುಪಾಲರು ಮುತುವರ್ಜಿ ವಹಿಸಿ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ಆಗುವಂತೆ ನೋಡಿಕೊಳ್ಳಬೇಕು. ಕೆಲಸದಲ್ಲಿ ಏನಾದರೂ ಲೋಪಗಳು ಕಾಣಿಸಿದರೆ ಗುತ್ತಿಗೆದಾರರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ, ಬಾಲಾಜಿ ಠಾಕೂರ್, ಸುಜಿತ ರಾಠೋಡ, ಬಸವರಾಜ ಹಳ್ಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.