ದಿ ಇನ್ಫಿನಿಟಿ ಶಾಲೆಯಲ್ಲಿ ಅಕ್ಕ ಪಡೆಯಿಂದ ಜಾಗೃತಿ ಕಾರ್ಯಕ್ರಮ
ನೆರವಿಗೆ ಪೊಲೀಸರಿಗೆ ಕರೆ ಮಾಡಿ
ಬೀದರ್: ಮಕ್ಕಳು ಯಾವುದೇ ಅಪಾಯ ಅಥವಾ ತುರ್ತು ಸಂದರ್ಭಗಳಲ್ಲಿ ನೆರವಿಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100 ಇಲ್ಲವೇ ತುರ್ತು ಸೇವೆ ಸಂಖ್ಯೆ 112 ಗೆ ಕರೆ ಮಾಡಬೇಕು ಎಂದು ಬೀದರ್ ಡಿವೈಎಸ್‍ಪಿ ಶಿವನಗೌಡ ಪಾಟೀಲ ಹೇಳಿದರು.
ನಗರದ ನೌಬಾದ್-ಚೊಂಡಿ ರಸ್ತೆಯಲ್ಲಿ ಇರುವ ದಿ ಇನ್ಫಿನಿಟಿ ಶಾಲೆಯಲ್ಲಿ ಅಕ್ಕ ಪಡೆ ವತಿಯಿಂದ ಗುರುವಾರ ನಡೆದ ಮಕ್ಕಳ ಸುರಕ್ಷತೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಮತ್ತು ಸಾರ್ವಜನಿಕರ ರಕ್ಷಣೆ ಹಾಗೂ ಸುರಕ್ಷತೆಯೇ ಪೊಲೀಸ್ ಇಲಾಖೆಯ ಆದ್ಯತೆಯಾಗಿದೆ ಎಂದು ತಿಳಿಸಿದರು.
ಮಕ್ಕಳು ಉತ್ತಮ ಸ್ಪರ್ಶ, ಕೆಟ್ಟ ಸ್ಪರ್ಶದ ಬಗ್ಗೆ ಅರಿವು ಹೊಂದಬೇಕು. ಅನಾವಶ್ಯಕ ಸ್ಪರ್ಶವಾದರೆ ಕೂಡಲೇ ಶಿಕ್ಷಕರು ಹಾಗೂ ಪಾಲಕರ ಗಮನಕ್ಕೆ ತರಬೇಕು. ರಸ್ತೆ ದಾಟುವಾಗ ಸುರಕ್ಷತಾ ನಿಯಮ ತಪ್ಪದೆ ಪಾಲಿಸಬೇಕು ಎಂದು ಹೇಳಿದರು.

ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣ, ಇಂಟರ್ನೆಟ್ ಬಳಕೆ ಸಂದರ್ಭದಲ್ಲಿ ಎದುರಾಗುವ ಅಪಾಯ, ಮೋಸದ ಕರೆ, ಹ್ಯಾಕಿಂಗ್ ಮುಂತಾದ ಸೈಬರ್ ಅಪರಾಧಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಶಾಲೆಯ ಒಳಗೆ ಹಾಗೂ ಹೊರಗೆ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು ಬಹಳ ಅವಶ್ಯಕ ಎಂದು ಅಕ್ಕ ಪಡೆಯ ಎಎಸ್‍ಐ ಸಂಗೀತಾ ಹೇಳಿದರು.
ಸಂಟಕದ ಸಂದರ್ಭದಲ್ಲಿ ಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದನ್ನೂ ಅವರು ವಿವರಿಸಿದರು.
ಕಾರ್ಯಕ್ರಮವು ಮಕ್ಕಳಲ್ಲಿ ವಿವಿಧ ವಿಷಯಗಳ ಕುರಿತು ತಿಳಿವಳಿಕೆ ಮೂಡಿಸಲು ನೆರವಾಗಿದೆ ಎಂದು ದಿ ಇನ್ಫಿನಿಟಿ ಸ್ಕೂಲ್ ಟ್ರಸ್ಟಿ ಲಕ್ಷ್ಮಿ ಮುಗಳಿ ತಿಳಿಸಿದರು.
ಅಕ್ಕ ಪಡೆಯ ಸುಜಾತಾ ದೇವಿ, ಶೋಭಾ, ಭಾರತಿ, ಶಾಲೆಯ ಪ್ರಾಚಾರ್ಯೆ ಡಾ. ಮೆಲ್ವಿನ್ ಬಾಬಿ ಮರ್ಜೆ, ಉಪ ಪ್ರಾಚಾರ್ಯೆ ಪ್ರಾಪ್ತಿ ನಾಯಕ್, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
