ಬೀದರ್: ಬೆಂಗಳೂರಿನ ಬಸವ ಪರಿಷತ್ ವತಿಯಿಂದ ಕೊಡಲಾಗುವ ಪ್ರಸಕ್ತ ಸಾಲಿನ ಬಸವ ಪುರಸ್ಕಾರಕ್ಕೆ ಖ್ಯಾತ ಉದ್ಯಮಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಅವರನ್ನು ಆಯ್ಕೆ ಮಾಡಲಾಗಿದೆ.
ಉದ್ಯಮ ಹಾಗೂ ಸಮಾಜ ಸೇವೆಗಾಗಿ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಗಸ್ಟ್ 9 ರಂದು ನಡೆಯಲಿರುವ ಸಮಾರಂಭದಲ್ಲಿ ಪರಿಷತ್ ಪ್ರಶಸ್ತಿ ಪ್ರದಾನ ಮಾಡಲಿದೆ.
ಬಸವರಾಜ ಧನ್ನೂರ ಅವರು ಮೂರು ದಶಕಗಳಿಂದ ಉದ್ಯಮ ಹಾಗೂ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಬಸವ ಕಾಯಕ ದಾಸೋಹ ಫೌಂಡೇಷನ್ ಅಧ್ಯಕ್ಷ, ಗಾಂಧಿಗಂಜ್‍ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ, ದಾಲ್ ಮಿಲ್ ಓನರ್ಸ್ ಅಸೋಸಿಯೇಷನ್ ಕಾರ್ಯದರ್ಶಿ, ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಪಬ್ಲಿಕ್ ಇಮೇಜ್ ಅಧ್ಯಕ್ಷ ಸೇರಿ ವಿವಿಧ ಸಂಘ ಸಂಸ್ಥೆಗಳ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಬಸವ ಪುರಸ್ಕಾರಕ್ಕೆ ತಮ್ಮನ್ನು ಆಯ್ಕೆ ಮಾಡಿರುವುದು ಸಂತಸ ಉಂಟು ಮಾಡಿದೆ. ಪ್ರಶಸ್ತಿ ತಮಗೆ ಉದ್ಯಮ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಇನ್ನಷ್ಟು ಉತ್ಸಾಹದೊಂದಿಗೆ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದು ಬಸವರಾಜ ಧನ್ನೂರ ಪ್ರತಿಕ್ರಿಯಿಸಿದ್ದಾರೆ.
