Sunday, July 13, 2025
HomePopularಸರ್ವ ರೋಗಕ್ಕೂ ಯೋಗ ಮದ್ದು : ಶಾಸಕ ಪ್ರಭು ಚವ್ಹಾಣ

ಸರ್ವ ರೋಗಕ್ಕೂ ಯೋಗ ಮದ್ದು : ಶಾಸಕ ಪ್ರಭು ಚವ್ಹಾಣ

ಔರಾದನಲ್ಲಿ ಅಂತಾರಾಷ್ಟಿಯ ಯೋಗ ದಿನಾಚರಣೆ
ಸರ್ವ ರೋಗಕ್ಕೂ ಯೋಗ ಮದ್ದು: ಶಾಸಕ ಪ್ರಭು ಚವ್ಹಾಣ

ಬೀದರ್ :  ಸರ್ವ ರೋಗಗಳಿಗೂ ಯೋಗದಲ್ಲಿ ಪರಿಹಾರವಿದ್ದು, ಎಲ್ಲರೂ ಪ್ರತಿದಿನ ತಪ್ಪದೇ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಎಲ್ಲ ಶಾಲೆಗಳಲ್ಲಿ ಪ್ರತಿದಿನ ಕನಿಷ್ಠ ಅರ್ಧ ಗಂಟೆ ಯೋಗಾಭ್ಯಾಸ ಮಾಡಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಔರಾದ(ಬಿ) ಮಂಡಲ ವತಿಯಿಂದ ಜೂನ್ 21ರಂದು ಪಟ್ಟಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಕೇವಲ ಶರೀರಕ್ಕೆ ಮಾತ್ರವಲ್ಲದೇ ಮಾನಸಿಕ ಆರೋಗ್ಯಕ್ಕೂ ಸಹಕಾರಿ. ಯೋಗದಿಂದ ಮಾನಸಿಕ ಶುದ್ಧಿ, ಚಂಚಲತೆ ದೂರವಾಗುತ್ತದೆ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಅದೆಷ್ಟೋ ಕಾಯಿಲೆಗಳು ಯೋಗದಿಂದ ವಾಸಿಯಾಗಿರುವ ಉದಾಹರಣೆಗಳಿವೆ. ಹಾಗಾಗಿ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ಮಕ್ಕಳಿಗೆ ಯೋಗದ ಮಹತ್ವ ತಿಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಭಾರತೀಯ ಪರಂಪರೆಯಲ್ಲಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಹಾಗಾಗಿಯೇ ಹಿರಿಯರು ನೂರು ವರ್ಷ ಬಾಳುತ್ತಿದ್ದರು. ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್, ಟಿವಿಗಳಲ್ಲಿ ಕಾಲಹರಣ ಮಾಡುತ್ತಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಕಾರಣ ಸಾಕಷ್ಟು ರೋಗಗಳು ಬಾಧಿಸುತ್ತಿವೆ. ಯುವಜನತೆ ಈ ಕುರಿತು ಎಚ್ಚರ ವಹಿಸಬೇಕು ಎಂದರು.

ನಮ್ಮ ಋಷಿಮುನಿಗಳು ಕಾಪಾಡಿಕೊಂಡು ಬಂದ ಯೋಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವ ಮಟ್ಟದಲ್ಲಿ ಬೆಳೆಸಿದ್ದಾರೆ. ಯೋಗಗುರು ರಾಮದೇವ ಬಾಬಾರಂತಹ ಸಾಕಷ್ಟು ಋಷಿಮುನಿಗಳು ಯೋಗದ ಪ್ರಚಾರ, ಪ್ರಸಾರಕ್ಕಾಗಿ ದುಡಿಯುತ್ತಿದ್ದಾರೆ. ಇಂದು ಯೋಗದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಎಲ್ಲರೂ ಯೋಗದತ್ತ ವಾಲುತ್ತಿದ್ದಾರೆ ಎಂದರು.
ಆರೋಗ್ಯವೇ ಭಾಗ್ಯ ಎನ್ನುವಂತೆ ಆರೋಗ್ಯ ಸರಿಯಿದ್ದರೆ ಏನಾದರೂ ಸಾಧಿಸಬಹುದು. ಹಾಗಾಗಿ ಜೀವನಕ್ಕೆ ಯೋಗ ಅತ್ಯಂತ ಅವಶ್ಯಕ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳಬೇಕು. ಯೋಗಾಭ್ಯಾಸ ಮಾಡಬೇಕು. ಯಾವುದೇ ದುಷ್ಚಟಗಳಿಗೆ ಬಲಿಯಾಗಬಾರದು ಎಂದು ಶಾಸಕರು ಕಿವಿಮಾತು ಹೇಳಿದರು.
ಯೋಗ ತರಬೇತಿ ನೀಡಿದ ಯೋಗಗುರು ಹಾವಗಿರಾವ ವಟಗೆ ಮಾತನಾಡಿ, ಜಗತ್ತಿನಲ್ಲಿ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ತಮ್ಮಲ್ಲಿರುವ ವಾಹನಗಳನ್ನು ಸ್ವಚ್ಛವಾಗಿಡುವುದು, ಸರ್ವಿಸಿಂಗ್ ಕೊಡುವುದು ಮಾಡಲಾಗುತ್ತದೆ. ಆದರೆ ಅತ್ಯಂತ ಮಹತ್ವವಾಗಿರುವ ಆರೋಗ್ಯಕ್ಕೆ ಕಾಳಜಿ ವಹಿಸದಿರುವುದು ದುರದೃಷ್ಟಕರ. ಪ್ರತಿದಿನ ಯೋಗಾಭ್ಯಾಸ ಮಾಡಿದರೆ ಯಾವುದೇ ರೋಗಗಳು ಬಳಿಗೆ ಸುಳಿಯುವುದಿಲ್ಲವೆಂದು ತಿಳಿಸಿದರು. ಯೋಗಗುರು ಧನರಾಜ ವಲ್ಲೆಪೂರೆ, ಶಿವರಾಜ ಶೆಟಕಾರ, ಶಿವರಾಜ ಶಿವರಾಜ ಝುಲಂಡೆ ಅವರು ಯೋಗ ತರಬೇತಿ ನೀಡಿದರು.
ಯೋಗ ದಿನಾಚರಣೆಯ ಸಂಚಾಲಕರಾದ ಶಿವರಾಜ ಅಲ್ಮಾಜೆ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ದಯಾನಂದ ಘೂಳೆ, ಡಾ.ವೈಜಿನಾಥ ಬುಟ್ಟೆ, ಸಚಿನ ರಾಠೋಡ, ಕೇರಬಾ ಪವಾರ, ಖಂಡೋಬಾ ಕಂಗಟೆ, ಪ್ರವೀಣ ಕಾರಬಾರಿ, ಮಹಾದೇವ ಅಲ್ಮಾಜೆ, ಸಂಜು ವಡೆಯರ್, ಯಾದು ಮೇತ್ರೆ, ಬಸವರಾಜ ಹಳ್ಳೆ, ಗುಂಡಪ್ಪ ಮುಧಾಳೆ, ಭರತ ಕದಂ, ಶ್ರೀನಿವಾಸ ಖೂಬಾ, ಸಿದ್ರಾಮಪ್ಪ ನಿಡೋದೆ, ಉದಯ ಸೋಲಾಪೂರೆ, ಇನಿಲ್ ಹೊಳಸಮುದ್ರೆ, ಹಣಮಂತ ನೇಳಗೆ, ಪ್ರದೀಪ ಪವಾರ, ಧನಾಜಿ ರಾಠೋಡ, ಅನೀಲ ಬಿರಾದಾರ, ಗೋವಿಂದ ಪಾಟೀಲ, ನಾಗನಾಥ ಮೋರ್ಗೆ, ಸಂಜು ಮುರ್ಕೆ, ರವೀಂದ್ರ ರೆಡ್ಡಿ, ಪ್ರಕಾಶ ಮೇತ್ರೆ, ಯೋಗೇಶ ಸುರನಾರ, ಸೀತಾರಾಮ ಕೋರೆಕಲ್, ಮಹೇಶ ಭಾಲ್ಕೆ, ಶೇಷಿರಾವ ರಾಠೋಡ, ಬಾಲಾಜಿ ಕಾಸ್ಲೆ, ಸೇರಿದಂತೆ ಇತರರು ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3