23 ರಿಂದ ಅಕ್ಕ ಅನ್ನಪೂರ್ಣತಾಯಿ ಸ್ಮರಣೋತ್ಸವ: ಪ್ರಭುದೇವ ಸ್ವಾಮೀಜಿ
ಬೀದರ್: ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಮೇ 23 ಹಾಗೂ 24 ರಂದು ಅಕ್ಕ ಅನ್ನಪೂರ್ಣತಾಯಿ ಅವರ ಪ್ರಥಮ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ನಗರದ ಬಸವಗಿರಿಯಲ್ಲಿ ಭವ್ಯ ವೇದಿಕೆ, ಮಂಟಪ ನಿರ್ಮಾಣ, ವಸತಿ, ಪ್ರಸಾದ ಸೇರಿದಂತೆ ಅಗತ್ಯ ಸಿದ್ಧತೆಗಳು ಭರದಿಂದ ನಡೆದಿವೆ. ವಿವಿಧ ಸಮಿತಿಗಳ ಪದಾಧಿಕಾರಿಗಳು ಸ್ಮರಣೋತ್ಸವದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ಭಕ್ತರಿಗೆ ಬಸವಗಿರಿಯ ದಾಸೋಹ ಭವನದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಎರಡು ದಿನ ನಿರಂತರ ಪ್ರಸಾದ ದಾಸೋಹ ಇರಲಿದೆ ಎಂದು ಹೇಳಿದರು.
ಬೀದರ್, ಕೊಪ್ಪಳ, ವಿಜಯಪುರ, ಹೊಸಪೇಟೆ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಿ, ಅಕ್ಕನವರ ಭಕ್ತರು ಹಾಗೂ ಬಸವಾನುಯಾಯಿಗಳನ್ನು ಸ್ಮರಣೋತ್ಸವಕ್ಕೆ ಆಹ್ವಾನಿಸಲಾಗಿದೆ. ರಾಜ್ಯದ ಜಿಲ್ಲೆಗಳು, ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರ ಸೇರಿದಂತೆ ಆರು ಸಾವಿರ ಜನ ಸ್ಮರಣೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
೨೩ ರಂದು ಸಂಜೆ ೫ಕ್ಕೆ ನಡೆಯುವ ಸಮಾರಂಭದಲ್ಲಿ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಸ್ಮರಣೋತ್ಸವಕ್ಕೆ ಚಾಲನೆ ನೀಡುವರು. ಬಸವಕಲ್ಯಾಣದ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಅನುಭಾವ. ಮಂಡಿಸುವರು. ಭಾತಂಬ್ರಾದ ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯ, ಧಾರವಾಡ ಡಾ. ಬಸವಾನಂದ ಸ್ವಾಮೀಜಿ, ಬೇಲೂರಿನ ಪಂಚಾಕ್ಷರಿ ಸ್ವಾಮೀಜಿ, ಸಿಂಧನಕೇರಾದ ಹೊನ್ನಲಿಂಗ ಸ್ವಾಮೀಜಿ ಸಮ್ಮುಖ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಜೈರಾಜ ಖಂಡ್ರೆ ಅಧ್ಯಕ್ಷತೆ ವಹಿಸುವರು. ಬಳ್ಳಾರಿಯ ಶಿವಪ್ರಕಾಶ ಅಂಗಡಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಇದಕ್ಕೂ ಮುನ್ನ ಬೆಳಿಗ್ಗೆ ೭.೩೦ಕ್ಕೆ ಸಾಮೂಹಿಕ ವಚನ ಪಾರಾಯಣ ಹಾಗೂ ಅನುಭಾವ ಗೋಷ್ಠಿ ಜರುಗಲಿದೆ. ಬಸವಕಲ್ಯಾಣದ ಜಗದ್ಗುರು ಸಿದ್ಧರಾಮ ಸ್ವಾಮೀಜಿ ಸಾನಿಧ್ಯ ವಹಿಸುವರು. ಬಸವಕಲ್ಯಾಣದ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ ಹಾಗೂ ಭಾಲ್ಕಿಯ ಮಹಾಲಿಂಗ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಭಾಲ್ಕಿಯ ಬಸವಲಿಂಗ ಸ್ವಾಮೀಜಿ, ಬಸವ ತತ್ವ ಪ್ರಚಾರಕ ಸಿದ್ರಾಮಪ್ಪ ಕಪಲಾಪುರ ಸಮ್ಮುಖ, ಲಿಂಗಾಯತ ಮಹಾಮಠದ ಪರುಷ ಕಟ್ಟೆಯ ಚನ್ನಬಸವಣ್ಣ ಅಧ್ಯಕ್ಷತೆ ವಹಿಸುವರು. ಧಾರವಾಡದ ಬಸವರಾಜ ಹಡಪದ ಷmಸ್ಥಲ ಧ್ವಜಾರೋಹಣ ಮಾಡುವರು ಎಂದು ತಿಳಿಸಿದರು.

೨೪ ರಂದು ಬೆಳಿಗ್ಗೆ ೧೧ಕ್ಕೆ ಸಮವಸ್ತçಧಾರಿ ೭೭೦ ಶರಣೆಯರಿಂದ ಅಕ್ಕನ ಯೋಗಾಂಗ ತ್ರಿವಿಧಿ ಪಠಣ ನಡೆಯಲಿದೆ. ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ‘ರೋಟರಿ ಫುಡ್ ಆನ್ ವೀಲ್ಸ್- ಅನ್ನಪೂರ್ಣ’ ಯೋಜನೆಗೆ ಚಾಲನೆ ನೀಡುವರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ, ತನ್ನ ನೇತೃತ್ವದಲ್ಲಿ, ಆಳಂದದ ಕೋರಣೇಶ್ವರ ಸ್ವಾಮೀಜಿ ಸಮ್ಮುಖ, ನೀಲಮ್ಮನ ಬಳಗದ ನೀಲಮ್ಮ ರೂಗನ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ವಿಜಯಪುರದ ಡಾ. ಜೆ.ಎಸ್. ಪಾಟೀಲ ಲಿಂಗಾಯತ ಚಳವಳಿ ಐತಿಹಾಸಿಕ ಹಿನ್ನೆಲೆ ಕುರಿತು ಮುಖ್ಯ ಅನುಭಾವ ಮಂಡಿಸುವರು. ಹೈಕೋರ್ಟ್ ನ್ಯಾಯವಾದಿ ಹಾಗೂ ಲೋಕಾಯುಕ್ತ ವಿಶೇಷ ಪಿ.ಪಿ. ಸಂತೋಷ್ ಎಸ್. ನಾಗರಾಳಿ ಮುಖ್ಯ ಅತಿಥಿಗಳಾಗಿ, ಖೇಳಗಿಯ ಶಿವಲಿಂಗ ಸ್ವಾಮೀಜಿ, ಕಲಬುರಗಿಯ ಮಾತೆ ಪ್ರಭುಶ್ರೀ, ಮನ್ನಾಎಚ್ಚೆಳ್ಳಿಯ ಮಾತೆ ಮೈತ್ರಾದೇವಿ ತಾಯಿ ವಿಶೇಷ ಆಮಂತ್ರಿತರಾಗಿರುವರು ಎಂದು ತಿಳಿಸಿದರು.
ಸಂಜೆ ೪.೩೦ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು ಸಾನಿಧ್ಯ. ಗುರುಮಠಕಲ್‌ನ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮೀಜಿ, ಬೇಲೂರಿನ ಶಿವಕುಮಾರ ಸ್ವಾಮೀಜಿ ಸಮ್ಮುಖ, ಕಲಬುರಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಶರಣಬಸವ ಮಠಪತಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಬಸವಕಲ್ಯಾಣದ ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ ಮುಖ್ಯ ಅತಿಥಿ, ಠಾಣಾಕುಶನೂರದ ಸಿದ್ಧಲಿಂಗ ಸ್ವಾಮೀಜಿ, ಸಾಯಗಾಂವ್‌ನ ಶಿವಾನಂದ ಸ್ವಾಮೀಜಿ, ಹುಡಗಿಯ ಚನ್ನಮಲ್ಲದೇವರು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುವರು. ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ಪೂರ್ಣಚಂದ್ರ ಮೈನಾಳೆ ಹಾಗೂ ತಂಡದವರು ಕಲ್ಯಾಣ ಕ್ರಾಂತಿ ರೂಪಕ ಹಾಗೂ ವಚನ ನೃತ್ಯ ಪ್ರದರ್ಶಿಸುವರು ಎಂದು ತಿಳಿಸಿದರು.
ಸಾಹಿತಿ ರಮೇಶ ಮಠಪತಿ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಸ್ಮರಣೋತ್ಸವ ದಿನದಂದು ಲಿಂಗಾಯತ ಮಹಾ ಮಠವು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಸಹಯೋಗದಲ್ಲಿ ‘ರೋಟರಿ ಫುಡ್ ಆನ್ ವ್ಹೀಲ್ಸ್- ಅನ್ನಪೂರ್ಣ’ ಯೋಜನೆಯನ್ನು ಜಾರಿಗೊಳಿಸಲಿದೆ. ಯೋಜನೆಗೆ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಲಿಂಗಾಯತ ಮಹಾಮಠಕ್ಕೆ ರೂ. ೬ ಲಕ್ಷ ವೆಚ್ಚದ ವಿದ್ಯುತ್ ಚಾಲಿತ ವಾಹನ ಕೊಡುಗೆಯಾಗಿ ನೀಡಿದೆ. ಲಿಂಗಾಯತ ಮಹಾ ಮಠವು ಕಲ್ಯಾಣ ಮಂಟಪಗಳು, ಸಭೆ, ಸಮಾರಂಭದ ಸ್ಥಳಗಳಲ್ಲಿ ಪ್ರಸಾದ ವ್ಯರ್ಥ ಮಾಡದಂತೆ ಫಲಕ ಹಾಕಲಿದೆ. ಮಾಹಿತಿ ನೀಡುವ ಕಾರ್ಯಕ್ರಮಗಳ ಆಯೋಜಕರಿಂದ ಉಳಿಯುವ ತಾಜಾ ಆಹಾರ ಸಂಗ್ರಹಿಸಲಿದೆ. ಬಳಿಕ ಅದನ್ನು ರೈಲು ನಿಲ್ದಾಣ, ಬಸ್ ನಿಲ್ದಾಣ, ಆಸ್ಪತ್ರೆ ಹಾಗೂ ಇತರ ಸ್ಥಳಗಳಲ್ಲಿ ಅವಶ್ಯಕತೆ ಇರುವವರಿಗೆ ವಿತರಣೆ ಮಾಡಲಿದೆ. ಕಾರ್ಯಕ್ರಮಗಳಿಲ್ಲದ ದಿನಗಳಲ್ಲಿ ಲಿಂಗಾಯತ ಮಹಾ ಮಠದಲ್ಲಿ ಆಹಾರ ಸಿದ್ಧಪಡಿಸಿ, ವಿತರಣೆ ಮಾಡಲಾಗುವುದು ಎಂದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಶಿವಕುಮಾರ ಪಾಖಾಲ್, ಲಿಂಗಾಯತ ಮಹಾ ಮಠದ ಕಾರ್ಯದರ್ಶಿ ಚನ್ನಬಸಪ್ಪ ಹಂಗರಗಿ, ಪ್ರಮುಖರಾದ ರಾಜಕುಮಾರ ಪಾಟೀಲ, ಪ್ರಕಾಶ ಮಠಪತಿ, ಚಂದ್ರಶೇಖರ ಹೆಬ್ಬಾಳೆ, ಆರ್.ಕೆ. ಪಾಟೀಲ, ಮಲ್ಲಿಕಾರ್ಜುನ ಔರಾದ್, ನೀಲಮ್ಮ ರೂಗನ್, ಅಭಿಷೇಕ ಮಠಪತಿ, ಸಿ.ಎಸ್ ಪಾಟೀಲ, ಅಶೋಕ ಎಲಿ, ಪ್ರಭು ತಟಪಟ್ಟಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.