ಬೀದರ್: ಇಲ್ಲಿಯ ಬಸವೇಶ್ವರ ಕಾಲೊನಿಯ ಉದ್ಯಾನದ ಅಭಿವೃದ್ಧಿಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಶುಕ್ರವಾರ ಚಾಲನೆ ನೀಡಿದರು.
ಉದ್ಯಾನವನ್ನು ರೂ. 25 ಲಕ್ಷ ವೆಚ್ಚದಲ್ಲಿ ಮಾದರಿ ಉದ್ಯಾನವಾಗಿ ಅಭಿವೃದ್ಧಿ ಪಡಿಸಲಾಗುವುದು. ಸಸಿ ನೆಡುವಿಕೆ, ವಿದ್ಯುತ್ ದೀಪ, ವಾಕಿಂಗ್ ಟ್ರ್ಯಾಕ್, ತಂತಿ ಬೇಲಿ ಅಳವಡಿಕೆ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬಸವೇಶ್ವರ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ. ಅಶೋಕಕುಮಾರ ನಾಗೂರೆ ಅವರು ಕಾಲೊನಿಯ ಉದ್ಯಾನ ಅಭಿವೃದ್ಧಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ನಿರ್ವಹಣೆ ಕೊರತೆಯಿಂದಾಗಿ ಉದ್ಯಾನ ಹಾಳಾಗಿದೆ. ಉದ್ಯಾನದಲ್ಲಿ ಹುಲ್ಲು, ಸಸಿ ಬೆಳೆಸಬೇಕು. ಸಿಮೆಂಟ್ ಕುರ್ಚಿ, ಜಿಮ್ ಸಾಮಗ್ರಿ, ಕ್ರಿಕೆಟ್ ನೆಟ್, ಶುದ್ಧ ನೀರಿನ ಘಟಕ ಅಳವಡಿಸಬೇಕು. ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು ಎಂದು ಕೋರಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಸಚಿವರು ಉದ್ಯಾನ ಅಭಿವೃದ್ಧಿಗೆ ನಿರ್ದೇಶನ ನೀಡಿದ್ದರು. ಇದೀಗ ಉದ್ಯಾನ ಅಭಿವೃದ್ಧಿಗೆ ಚಾಲನೆ ದೊರೆತಿದೆ.
ನಗರದ ಹಳೆಯ ಉದ್ಯಾನಗಳಲ್ಲಿ ಒಂದಾದ ಬಸವೇಶ್ವರ ಕಾಲೊನಿಯ ಉದ್ಯಾನ ಅಭಿವೃದ್ಧಿ ಕಾರ್ಯ ಆರಂಭಿಸಿದ್ದಕ್ಕೆ ಡಾ. ಅಶೋಕಕುಮಾರ ನಾಗೂರೆ ಸಂತಸ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಶಾಂತ ದೊಡ್ಡಿ, ಆಯುಕ್ತ ಶಿವರಾಜ ರಾಠೋಡ್, ಕಾಲೊನಿಯ ಗಣ್ಯರು ಇದ್ದರು.