ಬೀದರ್ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಏ.18ರಂದು ಬೀದರನಲ್ಲಿ ನಡೆಯಲಿರುವ ಜನಾಕ್ರೋಶ ಯಾತ್ರೆಯಲ್ಲಿ ಹೆಚ್ಚಿನ ಜನ ಭಾಗವಹಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಸಾಕಷ್ಟು ಜನವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಹಣ ದುರ್ಬಳಕೆ, ಮುಸ್ಲಿಂ ಸಮಾಜದ ಓಲೈಕೆ, ಹಿಂದೂ ವಿರೋಧಿ ನೀತಿ, ಗ್ಯಾರಂಟಿ ಹೆಸರಿನಲ್ಲಿ ಜನತೆಗೆ ಮಾಡುತ್ತಿರುವ ಅನ್ಯಾಯದಂತಹ ಜನವಿರೋಧಿ ನಿಲುವುಗಳ ವಿರುದ್ಧ ಬಿಜೆಪಿಯಿಂದ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ನಡೆಸಲಾಗುತ್ತಿದೆ. ಅದರಂತೆ ಬೀದರ್‌ನಲ್ಲಿಯೂ ಬೃಹತ್ ಹೋರಾಟ ನಡೆಯಲಿದೆ ಎಂದಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರೊಂದಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಶ್ರೀರಾಮುಲು ಸೇರಿದಂತೆ ಅನೇಕ ಗಣ್ಯರ ತಂಡವು ಬೀದರ ಜಿಲ್ಲೆಗೆ ಆಗಮಿಸಲಿದೆ. ಬೀದರ್‌ನ ಗಣೇಶ ಮೈದಾನದಿಂದ ಪ್ರಮುಖ ರಸ್ತೆಗಳ ಮೂಲಕ ಶಿವಾಜಿ ಮಹಾರಾಜರ ವೃತ್ತದ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿ ನಂತರ ಬಹಿರಂಗ ಸಮಾವೇಶ ಏರ್ಪಡಿಸಲಾಗಿದೆ. ಬೂತ್ ಅಧ್ಯಕ್ಷರು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪ್ರಮುಖರು, ಪಕ್ಷದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಜನಾಕ್ರೋಶ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

ಬಿ.ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಪಕ್ಷದಲ್ಲಿ ಹೊಸ ಚೈತನ್ಯ ಮೂಡಿದೆ. ಸದಾ ಒಂದಿಲ್ಲೊಂದು ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದರ ಪರಿಣಾಮ ಎಲ್ಲಾ ಕಡೆಗಳಲ್ಲಿ ಕಾಣಿಸುತ್ತಿದೆ. ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಹುಮ್ಮಸ್ಸಿನಿಂದ ತೊಡಗಿಸಿಕೊಳ್ಳುತ್ತಿದ್ದಾರೆ. ಪಕ್ಷದಲ್ಲಿ ಯುವ ಕಾರ್ಯಕರ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿರುವ ವಿಜಯೇಂದ್ರ ಅವರು ಎಲ್ಲರನ್ನು ಜೊತೆಯಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರದ ಜನವಿರೋಧಿ ಯೋಜನೆಗಳು ಮತ್ತು ನಿಲುವುಗಳನ್ನು ಯಶಸ್ವಿಯಾಗಿ ವಿರೋಧಿಸುತ್ತಿದ್ದಾರೆ. ಹೋರಾಟಗಳು ರಾಜ್ಯಾದ್ಯಂತ ತೀವ್ರ ಸ್ವರೂಪದಿಂದ ನಡೆಯುತ್ತಿವೆ. ಜನಾಕ್ರೋಶ ಯಾತ್ರೆ ಕೂಡ ಯಶಸ್ವಿಯಾಗಿ ಮುಂದುವರೆದಿದೆ. ಬೀದರ್‌ನಲ್ಲಿಯೂ ಏ.18ರಂದು ಸಂಜೆ 4 ಗಂಟೆಗೆ ಜರುಗಲಿದ್ದು, ಎಲ್ಲರು ಉತ್ಸಾಹದೊಂದಿಗೆ ಆಗಮಿಸಬೇಕೆಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.