ಬೀದರ್. ಕರ್ನಾಟಕ್ಕೆ ಮುಕುಟವಾಗಿರುವ ಬೀದರ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು 2025 ಕೋಟಿ ರೂ. ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಗುಂಡಿ ಒತ್ತುವ ಮೂಲಕ ಉದ್ಘಾಟಿಸಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರಕಾರವು ಬದ್ಧವಾಗಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಜೊತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸಹ ಕೈಗೊಳ್ಳಲಾಗುತ್ತಿದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಅವರು ಇಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಬೀದರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ 2025 ಕೋಟಿ ರೂ.ಗಳ ಕಾಮಗಾರಿಗಳ ಉದ್ಘಾಟಿಸಿ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ ಇಂದು ಜರುಗಿದ ಈ ಕಾರ್ಯಕ್ರಮವೇ ಇದಕ್ಕೆ ಉದಾಹರಣೆ ಆಗಿದೆಯೆಂದರು.
ಪ್ರತಿಪಕ್ಷಗಳ ಟೀಕೆಗಳ ಹೊರತಾಗಿಯೂ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲಾಗಿದೆ. ಪ್ರತಿ ವರ್ಷ 52 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ರಾಜ್ಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸಮತೋಲನದ ಹಾದಿಯಲ್ಲಿ ಮುನ್ನಡೆಸುವ ಕಾಳಜಿಯುಳ್ಳ ಬೃಹತ್ ಮೊತ್ತದ ಬಜೇಟನ್ನು ಈ ವರ್ಷ ಮಂಡಿಸಲಾಗಿದೆ. ಒಟ್ಟು 4 ಲಕ್ಷ 9 ಸಾವಿರ ಕೋಟಿ ಮೊತ್ತದ ಬಜೆಟ್‌ನ್ನು ಮಂಡಿಸಲಾಗಿದೆ. ಕಳೆದ ವರ್ಷ ಕ್ಯಾಪಿಟಲ್ ಖರ್ಚು ಮಾಡಿದ್ದು 26 ಸಾವಿರ ಕೋಟಿ, ಈ ವರ್ಷ 83 ಸಾವಿರ ಕೋಟಿ. ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರ ಬದುಕಿನಲ್ಲಿ ಒಂದಲ್ಲ ಒಂದು ರೀತಿಯ ಬದಲಾವಣೆ, ಸುಧಾರಣೆ ತಂದಿರುವುದಲ್ಲದೆ ಆರ್ಥಿಕ ಸಂಚಲನವನ್ನು ಸಹ ದೊಡ್ಡ ಮಟ್ಟದಲ್ಲಿ ಸೃಷ್ಟಿಸಿದೆ. ಜಿ.ಎಸ್.ಟಿ. ಸಂಗ್ರಹದಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದರು.

ಪಂಚಗ್ಯಾರಂಟಿ ಯೋಜನೆಗಳ ಕಿರುಹೊತ್ತಿಗೆ ಕೈಪಿಡಿ ಬಿಡುಗಡೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತಂದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಕಿರುಹೊತ್ತಿಗೆ ಕೈಪಿಡಿಯನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ಬೀದರ ಜಿಲ್ಲೆಗೆ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಬಂಪರ್ ಕೊಡುಗೆ ಪಡೆದಿದ್ದಾರೆ. ಇಂದು ಐತಿಹಾಸಿಕ ದಿನ, ಈ ಭಾಗದ ನೀರಾವರಿ ಯೋಜನೆಗಳಿಂದ ಸಾವಿರಾರು ಎಕರೆ ಭೂಮಿಗೆ ನೀರು ಒದಗಲಿದೆ. ಕುಡಿಯುವ ನೀರು, ತಲೆಮೇಲೆ ಸೂರು ಶಿಕ್ಷಣ ಹಾಗೂ ಉದ್ಯೋಗ ಸೃಷ್ಠಿಯೇ ಸರಕಾರದ ಉದ್ದೇಶ. ಬಸವಣ್ಣನ ಈ ನಾಡಿನಲ್ಲಿ ಕಾಯಕ ಹಾಗೂಕೃಷಿ ಅಭಿವೃದ್ಧಿಗೆ ಒತ್ತು ನೀಡಲಾಗುವುದೆಂದರು.
2025 ಕೋಟಿ ರೂ.ಗಳ ಇಂದಿನ ಕಾರ್ಯಕ್ರಮ ಬೀದರ ಇತಿಹಾಸದಲ್ಲಿ ದಾಖಲೆಯಾಗಿದೆ. ಅಭಿವೃದ್ಧಿ ಪರ್ವಕ್ಕೆ ನಾಂದಿಯಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಇಲ್ಲಿ 371(ಜೆ) ಜಾರಿ ಮಾಡಿ 5 ಸಾವಿರ ಕೋಟಿ ರೂ. ಮೀಸಲಿಟ್ಟು ಎಲ್ಲ ವರ್ಗದ ಜನರ ಏಳ್ಗೆಗೆ ಸರಕಾರ ಶ್ರಮಿಸುತ್ತಿದೆಯೆಂದರು.
ಅರಣ್ಯ, ಜೀವಿಶಾಸ್ತç ಹಾಗೂ ಪರಿಸರ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಮಾತನಾಡಿ, 2025 ಕೋಟಿ ರೂ. ಯೋಜನೆ ಬೀದರಗೆ ಐತಿಹಾಸಿಕ ದಿನವಾಗಿದೆ. ಉಡಾನ್ ಯೋಜನೆಯಡಿ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ 3 ವರ್ಷದ ಬಳಿಕ ನಿಲ್ಲಿಸಿದ ಕಾರಣ ಬೀದರ್ ನಾಗರಿಕ ವಿಮಾನಯಾನ ಸೇವೆ ಕಳೆದ ಒಂದೂವರೆ ವರ್ಷದಿಂದ ಸ್ಥಗಿತವಾಗಿತ್ತು. ಹೀಗಾಗಿ ಬೀದರ್ ಜನರು, ವ್ಯಾಪಾರಸ್ಥರು, ಸಾಫ್ಟ್ವೇರ್ ಉದ್ಯಮಿಗಳು, ಪ್ರವಾಸಿಗರು ವಿಮಾನ ಹತ್ತಲು ಹೈದ್ರಾಬಾದ್ ಅಥವಾ ಗುಲ್ಬರ್ಗಾಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈಗ ರಾಜ್ಯ ಸರ್ಕಾರವೇ ಸಬ್ಸಡಿ ನೀಡಿ ವಿಮಾನಯಾನ ಸೇವೆ ಆರಂಭಿಸಿದೆ ಎಂದರು.

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್ ಜಿಲ್ಲೆ ನಂ.1 ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ಹೃದಯರೋಗದಿಂದ ಬಳಲುವವರು ಚಿಕಿತ್ಸೆಗಾಗಿ ಕಲಬುರ್ಗಿ, ಸೋಲಾಪುರ್, ಹೈದ್ರಾಬಾದ್‌ಗೆ ಹೋಗುವ ಸ್ಥಿತಿ ಇತ್ತು. ಈಗ ಬ್ರಿಮ್ಸ್ನಲ್ಲಿ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಚಿಕಿತ್ಸಾ ಘಟಕ ಮತ್ತು ಕ್ಯಾಥ್ ಲ್ಯಾಬ್ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ನೆರವೇರುತ್ತಿದೆ. ಬೀದರ್ ಜನತೆಗೆ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ಲಭಿಸಲಿದೆ ಎಂದರು.
ಬಸವ ಕಲ್ಯಾಣದ ಅತ್ಯಾಧುನಿಕ ಅನುಭವ ಮಂಟಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸೂ ಆಗಿದೆ. ಆಧುನಿಕ ಅನುಭವ ಮಂಟಪ ಕಾಮಗಾರಿಗೆ ನಮ್ಮ ಸರ್ಕಾರ 125 ಕೋಟಿ ಕೊಟ್ಟಿದೆ. ಮುಂದಿನ ವರ್ಷ ಏಪ್ರಿಲ್ ಒಳಗೆ ಕಾಮಗಾರಿ ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ. ಮುಂದಿನ ಏಪ್ರಿಲ್ ಒಳಗೆ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ, ಪ್ರತಿಪಕ್ಷಗಳು ಸರಕಾರದಲ್ಲಿ ಹಣ ಇಲ್ಲ ಎಂದು ಟೀಕಿಸುತ್ತಾರೆ ಆದರೆ ಇಂದು ಜರುಗಿದ 2025 ಕೋಟಿ ರೂ. ಕಾರ್ಯಕ್ರಮ ಅಬಿವೃದ್ಧಿಗೆ ಸಾಕ್ಷಿಯಾಗಿದೆಯೆಂದರು. ಸುಳ್ಳು ಆರೋಪಿಗಳು ಮಾಡುವವರು ಮಾಡಲಿ ಕಳೆದ ವರ್ಷ ತಮ್ಮ ಬೀದರ ಕ್ಷೇತ್ರಕ್ಕೆ 1500 ಕೋಟಿ ರೂ. ಮುಖ್ಯಮಂತ್ರಿಗಳು ನೀಡಿದ್ದಾರೆ. 50 ಕೋಟಿ ರೂ.ಗಳ 100 ಹಾಸಿಗೆಗಳ ಆಸ್ಪತ್ರೆ, ಈಗ ಬ್ರಿಮ್ಸ್ ಅಭಿವೃದ್ಧಿಗೆ 15 ಕೋಟಿ ನೀಡಿದ್ದಾರೆ. ನಗರಾಭಿವೃದ್ಧಿಗೆ , ಒಳಚರಂಡಿಗೆ ನೂರಾರು ಕೋಟಿ ನೀಡಿದ್ದಾರೆ. ಕಳೆದ 2 ವರ್ಷಗಳಲ್ಲಿ ಒಟ್ಟು 700 ಕೋಟಿ ರೂ. ನೀಡಿದ್ದಾರೆ ಎಂದರು.

ಕೇಂದ್ರದ ಉಡಾನ್ ಸಬ್ಸಿಡಿ ನೀಡದಿರುವದರಿಂದ ಕಳೆದ ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದ ಬೀದರ ನಾಗರೀಕ ವಿಮಾನಯಾನ ಸೇವೆಯು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ, ಪೌರಾಡಳಿತ ಸಚಿವರಾದ ರಹಿಂ ಖಾನ ಹಾಗೂ ಸಂಸದರಾದ ಸಾಗರ ಖಂಡ್ರೆ ಅವರ ಅವಿರತ ಪ್ರಯತ್ನದ ಫಲವಾಗಿ ಮತ್ತೆ ಪುನರಾರಂಭಗೊಂಡಿದ್ದು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು, ಬೀದರ ಲೋಕಸಭಾ ಸದಸ್ಯರಾದ ಸಾಗರ ಈಶ್ವರ ಖಂಡ್ರೆ, ಮಾಜಿ ಸಚಿವರಾದ ರಾಜಶೇಖರ ಪಾಟೀಲ, ಮಾಜಿ ಶಾಸಕರಾದ ಅಶೋಕ ಖೇಣಿ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಬಿ.ಪಾಟೀಲ, ಭೀಮರಾವ ಬಿ.ಪಾಟೀಲ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರುಗಳಾದ ಅರವಿಂದ ಅರಳಿ, ವಿಜಯಸಿಂಗ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ನಾರಾಯಣರಾವ, ಬೀದರ ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಕರ್ನಾಟಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಬೀದರ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಎಂ.ವಾನತಿ ಸೇರಿದಂತೆ ಜಿಲ್ಲೆಯ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
*****