ಬೆಳೆಹಾನಿ ಪರಿಹಾರಕ್ಕಾಗಿ ಪ್ರತಿಭಟನೆ, ಎಕರೆಗೆ 25 ಸಾವಿರ ಪರಿಹಾರ ನೀಡಲು ಒತ್ತಾಯ
ಡಿ.ಕೆ.ಸಿದ್ರಾಮ ನೇತೃತ್ವದಲ್ಲಿ, ನವಚೈತನ್ಯ ಸೇವಾ ಸಮಿತಿ ವತಿಯಿಂದ ಹೋರಾಟ
ಭಾಲ್ಕಿ: ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ, ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ನೇತೃತ್ವದಲ್ಲಿ ಬುಧವಾರ ನವಚೈತನ್ಯ ಸೇವಾ ಸಮಿತಿ ವತಿಯಿಂದ ಉಗ್ರ ಹೋರಾಟ ನಡೆಸಿ, ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮೂಲಕ ಸಲ್ಲಿಸಲಾಯಿತು. ಪ್ರಾರಂಭದಲ್ಲಿ ಪಟ್ಟಣದ ವಿವಿಧ ಬೀದಿಗಳಲ್ಲಿ ರೈತರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ ಕಚೇರಿಯಲ್ಲಿ ಸಮಾವೇಶ ಗೊಳಿಸಲಾಯಿತು.

ನಂತರ ಮಾತನಾಡಿದ ಎನ್.ಎಸ್.ಎಸ್.ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಅಗಷ್ಟ ತಿಂಗಳ ಕೊನೆಯಲ್ಲಿ ಸುರಿದ ಭಾರಿ ಮಳೆಯ ಪರಿಣಾಮವಾಗಿ ತಾಲೂಕಿನ ಸುಮಾರು 35 ಸಾವಿರ ಎಕರೆ ಜಮೀನಿನಲ್ಲಿ ಬೆಳೆದ ಉದ್ದು, ಹೆಸರು, ಸೋಯಾ, ತೊಗರಿ, ಕಬ್ಬು ಬೆಳೆಗಳು ಹಾನಿಗೊಳಗಾಗಿರುತ್ತವೆ. ಈ ಸಂಬಂಧ ತಾಲೂಕಿನ ಕೃಷಿ ನಿದೇರ್ಶಕರು ತಾಲೂಕಿನಲ್ಲಿ 33 ಸಾವಿರ ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗಿರುವುದಾಗಿ ವರದಿ ನೀಡಿರುತ್ತಾರೆ. ಕಾರಣ ತಕ್ಷಣವೇ ರೈತರ ಬೆಳೆ ಹಾನಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಬೆಳೆವಿಮೆ ಕಂಪನಿಗಳ ಜೊತೆ ಸಭೆ ನಡೆಸಿ, ಕೂಡಲೇ ರೈತರಿಗೆ ಹೆಚ್ಚಿನ ಬೆಳೆ ವಿಮೆ ಸಿಗುವಂತೆ ಮಾಡಬೇಕು. ಬೆಳೆವಿಮೆ ಕಂಪನಿಯವರು ರೈತರಿಂದ ಹಣ ವಸೂಲಿ ಮಾಡುತ್ತ, ದಲ್ಲಾಳಿ ಕೆಸಲ ಮಾಡುತ್ತಿರುವುದು ತಪ್ಪಿಸಬೇಕು. ಕಾರಂಜಾ ನದಿಯಿಂದ ನೀರು ಬಿಟ್ಟಾಗ ಸಾಕಷ್ಟು ಸಮಸ್ಯೆಯಾಗುತ್ತಿರುವ ದಾಡಗಿ, ನಿಡೇಬಾನ-ಆನಂದವಾಡಿ, ಇಂಚೂರ ಸೇತುವೆಗಳ ಎತ್ತರ ಹೆಚ್ಚಿಸಬೇಕು. ತಾಂತ್ರಿಕ ಕಾರಣಗಳಿಮದ ಸಮಸ್ಯೆ ಎದುರಿಸುತ್ತಿರುವ ಕೊಂಗಳಿ ಸೇತುವೆ ಬಳಿ ತಡೆಗೋಡೆ ನಿರ್ಮಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಳಗ ಹತ್ತಿರ ಕೇಳಿರುವ 500 ಕೋಟಿ ರೂ. ಅನುದಾನ ಜಿಲ್ಲೆಯ ರೈತರಿಗೆ ತಲುಪುವಂತೆ ಮಾಡಬೇಕು. ಸರ್ಕಾರದಿಂದ 100 ಕೊಟಿ ವಿಶೇಷ ಪ್ಯಾಕೆಜ್ ಘೋಷಿಸಿ, ಬಿಎಸ್‌ಎಸ್‌ಕೆ ಕಾರ್ಖಾನೆ ಕೂಡಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನವಚೈತನ್ಯ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಶರದ ದುರ್ಗಾಳೆ, ಉಪಾಧ್ಯಕ್ಷ ಕೈಲಾಸ ಪಾಟೀಲ, ಕಾರ್ಯದರ್ಶಿ ಜೈರಾಜ ಕೊಳ್ಳಾ, ಕಿಶನರಾವ ಪಾಟೀಲ ಇಂಚೂರಕರ, ಕೆ.ಡಿ.ಗಣೇಶ, ಸಂಗಮೇಶ ಟಂಕಸಾಲೆ, ಮನೋಹರ ಪಾಟೀಲ, ಬಾಲಾಜಿ ರೋಡೆ, ಮಾದಪ್ಪ ದೇಶಮುಖ, ಶರದ ಪಾಟೀಲ, ರವಿಶಂಕರ ಶೇರಿಕಾರ ಡೊಣಗಾಪೂರ ಸೇರಿದಂತೆ ಹಲವರು ಇದ್ದರು.
——————–
