ಸ್ವಾಮಿ ಅಭಯಾನಂದ ಮಹಾರಾಜ ಪ್ರತಿಪಾದನೆ ವಿವೇಕಾನಂದ ಆರೋಗ್ಯಧಾಮ ಲೋಕಾರ್ಪಣೆ
ಭಾರತೀಯ ವೈದ್ಯಶಾಸ್ತ್ರದಿಂದಲೇ ಆರೋಗ್ಯ ಭಾಗ್ಯ ಕಲ್ಪಿಸಲು ಸಾಧ್ಯ – ಸ್ವಾಮಿ ಅಭಯಾನಂದ
ಬೀದರ್: ಭಾರತದ ಪ್ರಾಚೀನ ವೈದ್ಯಶಾಸ್ತçವಾದ ಆಯುರ್ವೇದ, ಪ್ರಾಕೃತಿಕ ಚಿಕಿತ್ಸೆ, ಯೋಗ, ಧ್ಯಾನದಿಂದ ಮಾತ್ರ ಜನರಿಗೆ ಆರೋಗ್ಯ ಭಾಗ್ಯ ಕಲ್ಪಿಸಲು ಸಾಧ್ಯ ಎಂದು ಬೆಂಗಳೂರು ಯಲಹಂಕ ರಾಮಕೃಷ್ಣ ವಿವೇಕಾನಂದ ವೇದಾಂತಾಶ್ರಮದ ಅಧ್ಯಕ್ಷರಾದ ಸ್ವಾಮಿ ಅಭಯಾನಂದ ಮಹಾರಾಜ ಪ್ರತಿಪಾದಿಸಿದರು.
ಇಲ್ಲಿನ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಗುರುವಾರ ವಿವೇಕಾನಂದ ಆರೋಗ್ಯಧಾಮ ಉದ್ಘಾಟಿಸಿ ಮಾತನಾಡಿದ ಅವರು, ಆಯುರ್ವೇದ, ಪ್ರಾಕೃತಿಕ ಚಿಕಿತ್ಸೆ, ಯೋಗ ಮತ್ತು ಧ್ಯಾನ ಪ್ರತಿಯೊಬ್ಬರ ಸದೃಢ ಆರೋಗ್ಯಕ್ಕೆ ಆಧಾರಸ್ತಂಭಗಳಾಗಿವೆ. ಇವು ನಮ್ಮ ಪೂರ್ವಜರು ವಿಶ್ವಕ್ಕೆ ಕೊಟ್ಟಿರುವ ಶ್ರೇಷ್ಠ ಕೊಡುಗೆಯಾಗಿವೆ. ಈ ನಾಲ್ಕೂ ಚಿಕಿತ್ಸೆಗಳು ಒಂದೇ ಸೂರಿನಡಿ ಕಲ್ಪಿಸಲು ಆರೋಗ್ಯಧಾಮ ಸ್ಥಾಪಿಸಿರುವುದು ಜಿಲ್ಲೆಯ ಜನರಿಗೆ ವರದಾನವಾಗಲಿದೆ ಎಂದರು.

ಇಂದು ಬಹುತೇಕರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿವೆ. ಆಧುನಿಕತೆಯಲ್ಲಿ ಬದಲಾದ ಜೀವನ ಶೈಲಿ ಹಾಗೂ ಬದಲಾದ ಆಹಾರ ಶೈಲಿ ಇದಕ್ಕೆ ಕಾರಣ. ಈ ಎರಡನ್ನೂ ಬದಲಿಸಿ ಹೆಜ್ಜೆ ಹಾಕಿದರೆ ಆರೋಗ್ಯಮಯ ಬದುಕು ಸಾಧ್ಯವಾಗಲಿದೆ. ಇದಕ್ಕಾಗಿ ನಾವೆಲ್ಲರೂ “ಬದಲಿಸಿಕೊಳ್ಳೋಣ ಜೀವನ ಶೈಲಿ-ಬದಲಿಸಿಕೊಳ್ಳೋಣ ಆಹಾರ ಶೈಲಿ” ಎಂಬ ಘೋಷವಾಕ್ಯ ಮೊಳಗಿಸಿ ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ. ಈ ಭಾಗದ ಅನೇಕರು ಸಾಕಷ್ಟು ಹಣ ಖರ್ಚು ಮಾಡಿ ವಿವಿಧೆಡೆ ಚಿಕಿತ್ಸೆಗೆ ತೆರಳುತ್ತಿದ್ದರು.ಈ ಸಮಸ್ಯೆಗೆ ಆರೋಗ್ಯಧಾಮ ಪರಿಹಾರ ಕಲ್ಪಿಸಲಿದೆ. ಸ್ಥಳೀಯರು ಇದರ ಲಾಭ ಪಡೆಯಬೇಕೆಂದು ಕೋರಿದರು.
ಸಾನಿಧ್ಯ ವಹಿಸಿದ್ದ ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಮಾತನಾಡಿ, ಈ ಆರೋಗ್ಯಧಾಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಸಮತೋಲನಗೊಳಿಸುವ ಕಾರ್ಯ ಮಾಡಲಿದೆ. ಹಣ ಗಳಿಕೆ, ವ್ಯವಹಾರದ ದೃಷ್ಟಿಕೋನ ಬದಲಾಗಿ ಜನಾರೋಗ್ಯದ ಕಾಳಜಿಯೇ ಮುಖ್ಯ ಧ್ಯೇಯವಾಗಿದೆ. ಆಯುರ್ವೇದ, ಪ್ರಾಕೃತಿಕ ಚಿಕಿತ್ಸೆ, ಯೋಗ, ಧ್ಯಾನದ ಬಗ್ಗೆ ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿದಂತೆ ವಿವಿಧೆಡೆ ತೆರಳಿ ಪರಿಣಿತರಿಂದ ಉಪನ್ಯಾಸ, ವಿಚಾರ ಸಂಕಿರಣ, ಉಚಿತ ಆರೋಗ್ಯ ಶಿಬಿರ ಇನ್ನಿತರೆ ಜನಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕ ಗುಂಡಪ್ಪ ವಕೀಲ, ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಸದಾನಂದ ಜೋಶಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ಆರೋಗ್ಯಧಾಮ ಸಿಇಒ ಜಗದೀಶ ಮುಖೇಡಕರ್ ಮಾತನಾಡಿದರು. ಬೀದರ್ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ.ಶಟಕಾರ್, ಆರ್‌ಎಸ್‌ಎಸ್ ಸಂಘಚಾಲಕ ಶಿವರಾಜ ಹಲಶೆಟ್ಟಿ, ನಗರಸಭೆ ಸದಸ್ಯ ರಾಜು ಚಿಂತಾಮಣಿ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಧರ್ಮಸ್ಥಳ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಸೂರ್ಯ ಫೌಂಡೇಶನ್ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ, ಪ್ರಮುಖರಾದ ನಾರಾಯಣರಾವ ಮುಖೇಡಕರ್, ಆಲಮ್ಮ ತಾಯಿ, ನಿತಿನ್ ಕರ್ಪೂರ್, ಸಂತೋಷಕುಮಾರ ಪೂಜಾರಿ ಇತರರಿದ್ದರು.
============
ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತಲೂ ರೋಗ ಬರದಂತೆ ನೋಡಿಕೊಂಡು ನಿರೋಗಿಯಾಗಿ ಬಾಳುವುದೇ ನಿಜವಾದ ಜೀವನ. ಇದೇ ನಮ್ಮ ಭಾರತೀಯ ವೈದ್ಯವಿಜ್ಞಾನದ ಶ್ರೇಷ್ಠ ವಿಧಾನವಾಗಿದೆ. ಸ್ವಾತಂತ್ರö್ಯದ ಬಳಿಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತ್ಯೇಕ ಆಯುರ್ವೇದ ಸಚಿವಾಲಯ ಸ್ಥಾಪಿಸಿ ಇದಕ್ಕೆ ಉತ್ತೇಜನ ನೀಡಿದ್ದಾರೆ.
–ರಘುನಾಥರಾವ ಮಲ್ಕಾಪುರೆ
ವಿಧಾನ ಪರಿಷತ್ ಮಾಜಿ ಸಭಾಪತಿ
————————-
ಬೀದರ್ ಆಶ್ರಮ ಕಳೆದ ೨೧ ವರ್ಷಗಳಿಂದ ಇಲ್ಲಿ ವ್ಯಕ್ತಿ ನಿರ್ಮಾಣ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಾನಾ ಕಾರ್ಯಚಟುವಟಿಕೆ ನಡೆಸುತ್ತಿದೆ. ಸ್ವಾಮಿ ವಿವೇಕಾನಂದರ ಮೌಲಿಕ ಚಿಂತನೆಗಳನ್ನು ಜನಮಾನಸದಲ್ಲಿ ಬಿತ್ತಿ ಸುಂದರ, ಸಶಕ್ತ, ಸಮೃದ್ಧ ರಾಷ್ಟç ಕಟ್ಟುವಲ್ಲಿ ತೊಡಗಿದೆ. ವಿವೇಕಾನಂದರು ಚಿಕ್ಯಾಗೋದಲ್ಲಿ ಮಾಡಿದ ಭಾಷಣ ವಿಶ್ವದ ಇತಿಹಾಸ ಪುಟದಲ್ಲಿ ಸೇರಿದೆ.ಈ ಸ್ಮರಣೆ ದಿನದಂದೇ ಅವರ ಹೆಸರಿನಲ್ಲಿ ಆರೋಗ್ಯಧಾಮ ಆರಂಭಿಸಿರುವುದು ವಿಶೇಷ.
–ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ
ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರು
===============
