ಬೆಳೆ ಹಾನಿ ಪರಿಶೀಲಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ.
ಬಾವಗಿ ಕೆರೆಯಲ್ಲಿ ಬಾಗಿನ ಅರ್ಪಣೆ
ಬೀದರ್ : ಮುಂಗಾರಿನ ಮಳೆ ನಿರಂತರ ಹವಾಮಾನ ಬದಲಾವಣೆ ಮತ್ತು ನಿರಂತರ ಮಳೆಯ ಪರಿಣಾಮವಾಗಿ ರೈತರ ಜೀವನೋಪಾಯಕ್ಕೆ ತೀವ್ರ ಧಕ್ಕೆಯಾಗಿದೆ. ನಮ್ಮ ಬೀದರ್ ದಕ್ಷಿಣ ಸೇರಿ ಜಿಲ್ಲೆಯಾದ್ಯಂತ ಕಳೆದ ವಾರದಿಂದ ಸುರಿದ ಮಳೆಯಿಂದ ಅಪಾರ ಬೆಳೆ ಹಾನಿಗೀಡಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಸರ್ಕಾರ ವಾರದೊಳಗೆ ಪರಿಹಾರ ನೀಡಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದ್ದಾರೆ.
ಬೀದರ್ ದಕ್ಷಿಣ ಕ್ಷೇತ್ರದ ಬಾವಗಿ ಗ್ರಾಮದಲ್ಲಿರುವ ಸಣ್ಣ ನೀರಾವರಿ ಕೆರೆಗೆ ಬಾಗಿನ ಅರ್ಪಿಸಿ ಕ್ಷೇತ್ರದ ಬಾವಗಿ, ಶಮಶೀರನಗರ ಬಗದಲ್, ಮಂಗಲಗಿ ಜಮೀನುಗಳಿಗೆ, ಶಾಲೆ, ಮನೆಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿ ಮಾತನಾಡಿದರು.
ಮಳೆಬಿದ್ದ ಮರುದಿನವೇ ಅಧೀವೇಶನದಲ್ಲಿ ಮಾತನಾಡಿ ಸರ್ಕಾರದ ಗಮನಕ್ಕೆ ತಂದಿದ್ದೇನೆ ಹಾಗೂ ಕೆಲ ಗ್ರಾಮಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ತಿಳಿಸಲಾಗಿದೆ ಇದೀಗ ಬಿಟ್ಟು ಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇನ್ನೂಳಿದ ಅಲ್ಪ ಸ್ವಲ್ಪ ಬೆಳೆ ಸಹ ಸಂಪೂರ್ಣ ನಾಶವಾಗಿದ್ದು ನಮ್ಮ ಕ್ಷೇತ್ರದಲ್ಲಿ ಒಟ್ಟು ೧೪ ಸಾವಿರ ಹೆಕ್ಟೇರ್ ಪ್ರದೇಶ ಹಾನಿಯಾಗಿದೆ.

ಕಾರಂಜಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಈಗಾಗಲೇ ಹಲವು ರೈತರು ಭೂಮಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಇದೀಗ ಅವರಿಗಿರುವ ಸ್ವಲ್ಪ ಭೂಮಿಯಲ್ಲಿ ಬೆಳೆದ ಬೆಳೆ ಕೂಡ ನಷ್ಟವಾಗಿ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಹೀಗಾಗಿ ತಕ್ಷಣ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದರು.
ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿದ ಮಳೆಯಿಂದ ರೈತ ಕಷ್ಟಪಟ್ಟು ಬೆಳೆದ ಹೆಸರು,ಉದ್ದು,ಸೋಯಾಬೀನ,ತೋಗರಿ, ಕಬ್ಬು, ತೋಟಗಾರಿಕೆ ಬೆಳೆಯಾದ ಹಣ್ಣು, ತರಕಾರಿ ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ನೆಲಕಚ್ಚಿರುವುದು ಗಮನಕ್ಕೆ ಬಂದಿದೆ.
ಸಾವಿರಾರಕ್ಕೂ ಹೆಚ್ಚು ಹೆಸರು, ಉದ್ದು, ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿದ್ದು, ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಕೂಡಲೇ ಬೆಳೆ ಹಾನಿ ಸರ್ವೆ ಕಾರ್ಯ ಮಾಡಿ, ವರದಿ ನೀಡಿದರೆ, ಸರ್ಕಾರದ ಗಮನಕ್ಕೆ ತಂದು ನಷ್ಟ ಪರಿಹಾರ ಒದಗಿಸಲಾಗುವುದು ಆದ್ದರಿಂದ ಸಂಬAಧ ಪಟ್ಟ ಅಧಿಕಾರಿಗಳಿಗೆ ಶೀಘ್ರ ವರದಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ರೈತರು ಮೂರು ತಿಂಗಳು ಶ್ರಮಪಟ್ಟು ಬೆಳೆದ ಬೆಳೆಗಳು ಈಗ ಅತಿವೃಷ್ಟಿ ಮಳೆಗೆ ಹಾನಿಯಾಗಿರುವುದು ದುಃಖ ತರಿಸಿದೆ. ಇಲ್ಲಿನ ರೈತರನ್ನು ವಿಚಾರಿಸಿದಾಗ ಸುಮಾರು ಸಾವಿರಾರುಕ್ಕೂ ಅಧಿಕ ಎಕರೆಯಷ್ಟು ಉದ್ದು, ಹೆಸರು, ಸೋಯಾಬೀನ್, ತೋಗರಿ, ಬೆಳೆಗಳು ನೆಲಕಚ್ಚಿದ್ದು, ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಲಾಗಿದೆ. ರೈತರು ಹತಾಸೆಯಾಗದೇ, ಕುಗ್ಗದೇ ಧೈರ್ಯದಿಂದ ಇರಬೇಕು. ಆದಷ್ಟು ಬೇಗ ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರ ಒದಗಿಸಲಾಗುವುದು ಎಂದರು.
ಮೈದುಂಬಿ ಹರಿಯುತ್ತಿರುವ ಸಣ್ಣ ಕೆರೆಗೆ ಬಾಗಿನ ಅರ್ಪಣೆ.
ಬೀದರ್ ದಕ್ಷಿಣ ಕ್ಷೇತ್ರದ ಬಾವಗಿ ಗ್ರಾಮದ ಹೊರವಲಯದಲ್ಲಿರುವ ಸಣ್ಣ ನೀರಾವರಿ ಕೆರೆಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ಅತಿವೃಷ್ಟಿ ಕಡಿಮೆಯಾಗಿ ಮುಂಬರುವ ದಿನಗಳಲ್ಲಿ ಉತ್ತಮ ಬೆಳೆಯಾಗಲಿ ಎಂದು ಪ್ರಾರ್ಥಿಸಿದರು. ಕೆರೆ-ಹಳ್ಳಗಳು ಭರ್ತಿಯಾದರೆ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿ ಜನರಿಗೆ ನೀರಿನ ಬವಣೆ ತಪ್ಪುತ್ತದೆ ಆದರೆ ಇದೀಗ ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿ ನಷ್ಟವಾಗಿದ್ದು, ಕೂಡಲೇ ಸರ್ಕಾರ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ಶಮಶೀರನಗರ ಗ್ರಾಮದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮ ಶಾಲೆಗೆ ಹಾಗೂ ಮನೆಗೋಡೆ ಕುಸಿದು ಬಿದ್ದ ವಿಕ್ಷಣೆ.

ಬೀದರ್ ದಕ್ಷಿಣ ಕ್ಷೇತ್ರದ ಶಮಶೀರನಗರ ಗ್ರಾಮದ ಸರ್ಕಾರಿ ಕನ್ನಡ ಹಾಗೂ ಉರ್ದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಳೆಯಿಂದ ಹಾನಿಯಾದ ಕಟ್ಟಡ ವಿಕ್ಷಣೆ ಮಾಡಿ ಶಿಥಿಲಗೊಂಡಿರುವ ಕೊಠಡಿಯಲ್ಲಿ ಕುಳಿತು ಪಾಠ ಮಾಡಬಾರದು ಎಂದು ಸೂಚಿಸಿದರು ಅಂತಹ ಕೊಠಡಿ ತೆರವುಗೊಳಿಸಿ ಹೊಸ ಕೊಠಡಿ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮದಲ್ಲಿ ಕುಸಿದು ಬಿದ್ದ ಮನೆಗಳ ಪರಿಶೀಲನೆ ನಡೆಸಿದರು ಶೀಘ್ರ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಗದಲ್ ಗ್ರಾಮದ ಹೆದ್ದಾರಿಯಲ್ಲಿ ರಸ್ತೆ ಪಕ್ಕದಲ್ಲಿ ಕಾಲುವೆ ಸಮಸ್ಯೆಯಾಗಿ ಮಳೆ ನೀರು ಮನೆಗಳಿಗೆ ನುಗ್ಗಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಕಾಲುವೆ ಸೂಕ್ತ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಶಾಂತವೀರ ಹಜ್ಜರಗಿ, ಮುಖಂಡರಾದ ರಾಜರೆಡ್ಡಿ ಶಾಬಾದ, ಜಗನ್ನಾಥ ಪಾಟೀಲ, ನಾಗಭೂಷಣ ಕಮಠಾಣಾ, ಶಿವಕುಮಾರ ಸ್ವಾಮಿ, ಅಶೋಕ ಪಾಟೀಲ, ಅಡೆಪ್ಪಾ ಶೇರಿಕಾರ, ಚನ್ನಮಲ್ಲಪ್ಪ ಹಜ್ಜರಗಿ, ಬಸವರಾಜ ಕ್ಯಾಸಾ, ಗುರುನಾಥ ರಾಜಗೀರಾ, ಹೇಮಾ ರೆಡ್ಡಿ, ಸಂತೋಷ ರೆಡ್ಡಿ, ಶೇಖರ ನೌಬಾದೆ, ರವಿ ಬಾಲೆಬಾಯಿ, ನಾಗಶೆಟ್ಟಿ ಚೆಟನಳ್ಳಿ, ವೀರಶೆಟ್ಟಿ, ಸಂಗಮೇಶ ಹಜ್ಜರಗಿ, ರಾಜಕುಮಾರ ಪಾಟೀಲ, ಸಂತೋಷ ಜಗದಾಳೆ, ವೀರೇಶ ಬಮಣಿ, ಪ್ರಭು, ಸಿದ್ಧಾರೂಢ, ಮಂಜು, ರಾಜು ಮಡಿವಾಳ ಗ್ರಾಮಸ್ಥರು ರೈತರು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
